ರಾಷ್ಟ್ರೀಯ

ಅಡುಗೆ ಅನಿಲ ಸಿಲಿಂಡರ್‌ ಸಬ್ಸಿಡಿ ಸಂಪೂರ್ಣ ಸ್ಥಗಿತ

Pinterest LinkedIn Tumblr

 

ಹೊಸದಿಲ್ಲಿ: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಆಗಾಗ್ಗೆ ಏರಿಕೆ ಆಗುತ್ತಿರುವುದರಿಂದ ದೇಶೀಯ ಅಡುಗೆ ಅನಿಲಕ್ಕೆ ನೀಡುವ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ.

ಇನ್ನು ಮುಂದೆ ನಾನ್‌ ಸಬ್ಸಿಡಿ ಮತ್ತು ಸಬ್ಸಿಡಿ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಯಾರೇ ಸಿಲಿಂಡರ್ ಪಡೆಯಬೇಕೆಂದರೂ ಏಕರೂಪದ ಬೆಲೆ ಪಾವತಿಸಬೇಕು.

ಸೆಪ್ಟೆಂಬರ್‌ 1ರಿಂದಲೇ ಈ ನಿಯಮ ಜಾರಿಗೆ ಬಂದಿದ್ದು, ಪ್ರತಿ 14.2ಕೆಜಿ ತೂಕದ ಸಿಲಿಂಡರ್‌ಗೆ 594 ರೂಪಾಯಿ ನಿಗದಿಪಡಿಸಲಾಗಿದೆ. ಅಂದರೆ, ಗ್ಯಾಸ್‌ ಸಿಲಿಂಡರ್‌ಗಳಿಗೆ ಸರ್ಕಾರವು ಇನ್ನು ಮುಂದೆ ನೇರ ಲಾಭ ವರ್ಗಾವಣೆ ಯೋಜನೆ (ಡಿಬಿಟಿ) ಅಡಿ ಸಬ್ಸಿಡಿಯನ್ನು ಫಲಾನುಭವಿಗಳ ಖಾತೆಗೆ ಪಾವತಿಸುವುದಿಲ್ಲ.

ವಾಸ್ತವವಾಗಿ, ಪ್ರಸ್ತುತ ಆರ್ಥಿಕ ವರ್ಷದ ಆರಂಭದಿಂದಲೇ ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ನಡುವಿನ ಬೆಲೆಯ ಅಂತರ ಕಡಿಮೆಯಾಗುತ್ತಿತ್ತು. ಸರ್ಕಾರವು ಕಳೆದ ನಾಲ್ಕು ತಿಂಗಳುಗಳಿಂದ ಯಾವುದೇ ಫಲಾನುಭವಿಗಳ ಖಾತೆಗಳಿಗೆ ಸಬ್ಸಿಡಿ ಪಾವತಿಸಿರಲಿಲ್ಲ. ಸಬ್ಸಿಡಿ ಪಾವತಿ ಮಾಡಿಲ್ಲದಿರುವುದಕ್ಕೆ ಸರಕಾರ ಯಾವುದೇ ಕಾರಣ ತಿಳಿಸಿರಲಿಲ್ಲ. ಇದೀಗ ಗ್ಯಾಸ್‌ ಸಿಲಿಂಡರ್‌ಗಳ ಮೇಲಿನ ಸಬ್ಸಿಡಿಯನ್ನು ಸಂಪುರ್ಣವಾಗಿ ಸ್ಥಗಿತಗೊಳಿಸಿದೆ.

ರಾಜ್ಯದಲ್ಲಿ ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಲಿಮಿಟೆಡ್‌ನ ಗ್ರಾಹಕರು (ಐಒಸಿಎಲ್‌) 62.27 ಲಕ್ಷ, ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ (ಎಚ್‌ಪಿಸಿಎಲ್‌) ಗ್ರಾಹಕರು 48.83 ಲಕ್ಷ ಹಾಗೂ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ನ ( ಬಿಪಿಸಿಎಲ್‌) ಗ್ರಾಹಕರು 35.59 ಲಕ್ಷ ಮಂದಿ ಎಲ್‌ಪಿಜಿ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್‌ನ 13,93,748 ಗ್ರಾಹಕರು, ಬಿಪಿಸಿಎಲ್‌ನ 7,40,897 ಗ್ರಾಹಕರು ಹಾಗೂ ಎಚ್‌ಪಿಸಿಎಲ್‌ನ 10,11,042 ಗ್ರಾಹಕರು ಇದ್ದಾರೆ.

ದೇಶಾದ್ಯಂತ 26.12 ಕೋಟಿಗೂ ಹೆಚ್ಚು ಎಲ್‌ಪಿಜಿ ಗ್ರಾಹಕರು ‘ಡೈರೆಕ್ಟ್‌ ಬೆನಿಫಿಟ್‌ ಟ್ರಾನ್ಸ್‌ಫರ್‌’ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿದ್ದರು. ಇದಲ್ಲದೆ 18 ಕೋಟಿ ಗ್ರಾಹಕರು ಗ್ಯಾಸ್ ಸಿಲಿಂಡರ್‌ಗಳಿಗೆ ಯಾವುದೇ ಸಬ್ಸಿಡಿ ಪಡೆಯುವುತ್ತಿರಲಿಲ್ಲ. ಅಂದೆ ದೇಶದಲ್ಲಿ ಸುಮಾರು 45 ಕೋಟಿ ಎಲ್‌ಪಿಜಿ ಗ್ರಾಹಕರಿದ್ದಾರೆ.

ಆದರೆ, ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಿ ಮೂರು ತಿಂಗಳ ಕಾಲ ಕೇಂದ್ರ ಸರಕಾರ ಉಚಿತ ಅಡುಗೆ ಅನಿಲ ಘೋಷಿಸಿತ್ತು. ಹೀಗಾಗಿ ಉಜ್ವಲ ಯೋಜನೆಯಡಿ ಗ್ಯಾಸ್‌ ಸಿಲಿಂಡರ್‌ ಖರೀದಿಸಿರುವ ಬಡ ಜನರಿಗೆ ಹಣವನ್ನು ಆಯಾ ಖಾತೆಗಳಿಗೆ ವರ್ಗಾಯಿಸಲಿದೆ. ಇದಕ್ಕಾಗಿ ಕೇಂದ್ರ ಸರಕಾರ 9709.86 ಕೋಟಿ ರೂಪಾಯಿ ಹಣ ಮೀಸಲಿಟ್ಟಿದೆ. ಈ ಹಣ ಸುಮಾರು 8 ಕೋಟಿ ಫಲಾನುಭವಿಗಳಿಗೆ ತಲುಪಲಿದೆ.

 

Comments are closed.