ಬೆಂಗಳೂರು: ರಾಜ್ಯದ ರಾಜಕಾರಣದಲ್ಲಿ ಸ್ಯಾಂಡಲ್ವುಡ್ ಒಂದು ರೀತಿ ಊಟದಲ್ಲಿ ಉಪ್ಪಿನಕಾಯಿ ಇದ್ದಂಗೆ. ಎಲ್ಲಾ ಪಕ್ಷಗಳಲ್ಲಿ ಕೆಲ ಸಿನಿ ಸೆಲಬ್ರಿಟಿಗಳು ಅಂಟಿಕೊಂಡಿರುತ್ತಾರೆ. ಕಮಲ ಪಾಳಯಕ್ಕೆ ತುಪ್ಪವಾಗಲು ಹೋಗಿದ್ದ ನಟಿಯೊಬ್ಬರು ಇದೀಗ ಯಾಕೋ ಬೇಸರಗೊಂಡು ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಈ ನಟಿ ಯಾರೂ ಅಲ್ಲ, ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ. ಬಿಜೆಪಿಯಲ್ಲಿರುವ ಈ ಸ್ಯಾಂಡಲ್ವುಡ್ ಹೀರೋಯಿನ್ ಕಾಂಗ್ರೆಸ್ ಪಕ್ಷದತ್ತ ಮುಖ ಮಾಡುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ.
ರಾಗಿಣಿಗೆ ಕಮಲದ ಹೂ ಯಾಕೆ ಇಷ್ಟ ಆಗಲಿಲ್ಲ?
ಕಳೆದ ವರ್ಷ ಏಪ್ರಿಲ್ 14ರಂದು ಬಿಜೆಪಿ ಸೇರಿದ್ದ ರಾಗಿಣಿ ದ್ವಿವೇದಿ ಅವರಿಗೆ ಇಷ್ಟು ಬೇಗ ಹೂ ಬೇಸರ ಮೂಡಿಸಿದ್ದು ಅಚ್ಚರಿಯಾಗಿದೆ. ಕಮಲ ಪಾಳಯಕ್ಕೆ ಹೋಗಿ ಸುಮ್ಮನೆ ಕುಳಿತವರಲ್ಲ ಅವರು. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಕೆಆರ್ ಪೇಟೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡ ಅವರ ಪರವಾಗಿ ಬಿ.ವೈ. ವಿಜಯೇಂದ್ರ ಅವರ ಜೊತೆ ರಾಗಿಣಿ ಭರ್ಜರಿ ಪ್ರಚಾರ ಮಾಡುತ್ತಾ ಕ್ಷೇತ್ರ ಸುತ್ತಿದ್ದರು.
ಪಕ್ಷಕ್ಕಾಗಿ ಇಷ್ಟು ಕೆಲಸ ಮಾಡುತ್ತಿರುವ ತನಗೆ ಯಾವುದಾದರೂ ಒಂದು ಹುದ್ದೆ ಸಿಗಬಹುದು ಎಂಬುದು ಅವರ ನಿರೀಕ್ಷೆ ಇದ್ದಂತಿತ್ತು. ಬೇರೆ ಪಕ್ಷಗಳಿಂದ ಬಂದ ಬಹುತೇಕ ಎಲ್ಲರಿಗೂ ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ಸ್ಥಾನಮಾನ ಸಿಕ್ಕಿರುವಾಗ ರಾಗಿಣಿಗೆ ತನಗೂ ಏನಾದರೂ ಹುದ್ದೆ ಸಿಗಬಹುದು ಎಂದು ಅಪೇಕ್ಷೆ ಸಹಜ. ಉಪಚುನಾವಣೆ ನಂತರ ರಾಗಿಣಿ ಮುಡಿಗೆ ಯಾವ ಹೂ ಸಿಗಲಿಲ್ಲ. ಯಾರೂ ಕೇಳುವವರೇ ಇಲ್ಲವಾದರಂತೆ. ಸುಮ್ಮನೆ ಕೂತರೆ ಫಲವಿಲ್ಲ ಎಂದು ನೇರವಾಗಿ ಸಿಎಂ ಯಡಿಯೂರಪ್ಪ ಅವರನ್ನೇ ಭೇಟಿಯಾದರು. ಆದರೆ, ಮುಖ್ಯಮಂತ್ರಿಗಳು ಮುಂದೆ ನೋಡೋಣ ಎಂದರೇ ಹೊರತು ಸ್ಥಾನಮಾನದ ಗ್ಯಾರಂಟಿ ಕೊಡುತ್ತೇನೆಂದು ವಾಗ್ದಾನ ಮಾತ್ರ ನೀಡಲಿಲ್ಲವಂತೆ. ಇದರಿಂದ ರಾಗಿಣಿಗೆ ಕಿವಿಗೆ ಹೂ ಇಟ್ಟಂತನಿಸಿದೆಯಂತೆ.
ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ ತುಪ್ಪದ ಹುಡುಗಿ:
ಕಮಲದ ಹೂ ಬಗ್ಗೆ ಬೇಸರಗೊಂಡಿದ್ದ ರಾಗಿಣಿಗೆ ಕೈನಲ್ಲಿ ಉಜ್ವಲ ಭವಿಷ್ಯ ಇದೆ ಎಂದು ಯಾರೋ ಆಪ್ತರೊಬ್ಬರು ಕಿವಿಗೆ ಹಾಕಿದ್ದಾರೆನ್ನಲಾಗುತ್ತಿದೆ. ಬಿಜೆಪಿಗೆ ಈ ಅಧಿಕಾರ ಹೋದ ಬಳಿಕ ಮುಂದಿನ ಚುನಾವಣೆಯಲ್ಲಿ ಮತ್ತೆ ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದು ಆ ಆಪ್ತರು ಕೊಟ್ಟ ಸಲಹೆ ಈಗ ತುಪ್ಪದ ಹುಡುಗಿಯ ಮನಸನ್ನು ಕಲಕುತ್ತಿದೆ. ಕಾಂಗ್ರೆಸ್ ಶಾಸಕರೊಬ್ಬರ ಮಗನ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರನ್ನ ರಾಗಿಣಿ ಕಂಡು ಬಂದಿದ್ದಾರೆ.
ತಾನು ನಟಿ ಮಾತ್ರ ಅಲ್ಲ, ಕೋವಿಡ್ ಸಂದರ್ಭದಲ್ಲಿ ಸಮಾಜಸೇವೆ ಮಾಡಿದ್ದೇನೆ. ಕೈಗೆ ನಾನು ಶಕ್ತಿಯಾಗುತ್ತೇನೆ ಎಂದು ಖಂಡ್ರೆ ಬಳಿ ರಾಗಿಣಿ ಹೇಳಿಕೊಂಡಿದ್ದಾರೆ. ಖಂಡ್ರೆ ಕೂಡ ಪಾಸಿಟಿವ್ ಆಗಿ ಸ್ಪಂದಿಸಿದ್ದು ರಾಗಿಣಿಗೆ ಉತ್ಸಾಹ ಹೆಚ್ಚಿಸಿದೆ. ಹಾಗೆಯೇ, ರಾಗಿಣಿಗೆ ಈಗ ಪಕ್ಷಕ್ಕಿಂತ ಸ್ಥಾನಮಾನ ಮುಖ್ಯ. ಕಾಂಗ್ರೆಸ್ನಲ್ಲಿ ತನಗೆ ಒಳ್ಳೆಯ ಹುದ್ದೆ ಸಿಗುತ್ತದೆ ಎಂದಾದರೆ ರಾಗಿಣಿ ಯಾವಾಗ ಬೇಕಾದರೂ ಕೈ ಪಾಳಯಕ್ಕೆ ಜಂಪ್ ಮಾಡುವ ಸಾಧ್ಯತೆ ಇದೆ.
ಪಂಜಾಬಿ ಸಮುದಾಯದ ರಾಗಿಣಿ ದ್ವಿವೇದಿ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದವರು. ಫ್ಯಾಷನ್ ಡಿಸೈನರ್ ಕೂಡ ಹೌದು. 2009ರಲ್ಲಿ ವೀರ ಮದಕರಿ ಸಿನಿಮಾದಲ್ಲಿ ಸುದೀಪ್ಗೆ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಾಗಿಣಿ ಬಹಳಷ್ಟು ಭರವಸೆ ಮೂಡಿಸಿದ್ದ ನಟಿಯಾಗಿದ್ದವರು. ಅವರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಮೊದಲ ಇನ್ನಿಂಗ್ಸಲ್ಲಿ ತಕ್ಕಮಟ್ಟಿಗೆ ಹೆಸರು ಮಾಡಿರುವ ಈ ತುಪ್ಪದ ಹುಡುಗಿ ತಮ್ಮ ಎರಡನೇ ಇನ್ನಿಂಗ್ಸಲ್ಲಿ ಸ್ವಲ್ಪವಾದರೂ ಯಶಸ್ಸು ಗಳಿಸಬಲ್ಲರಾ ಎಂಬುದು ಕಾಲವೇ ಹೇಳಬೇಕು.
Comments are closed.