ತಮಿಳು, ಮಲಯಾಳಂ, ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ ಸಾಯಿ ಪಲ್ಲವಿ. ಹಾಗಂತ ಅವರು ಬೇರೆ ನಟಿಯರಂತೆ ವಿದ್ಯಾಭ್ಯಾಸಕ್ಕೆ ಗುಡ್ಬೈ ಹೇಳಿ ಬಣ್ಣದ ಲೋಕಕ್ಕೆ ಕಾಲಿಟ್ಟವರಲ್ಲ. ಜಾರ್ಜಿಯಾ ವಿಶ್ವವಿದ್ಯಾಲಯದಿಂದ ವೈದ್ಯಕೀಯ ಪದವಿ ಪಡೆದಿರುವುದು ಸಾಯಿ ಪಲ್ಲವಿ ಹೆಚ್ಚುಗಾರಿಕೆ. ಬಾಕಿ ಇದ್ದ ಒಂದು ಪರೀಕ್ಷೆ ಬರೆಯಲು ಅವರು ಇತ್ತೀಚೆಗೆ ಕಾಲೇಜಿಗೆ ತೆರಳಿದ್ದರು.
ವಿದೇಶದಲ್ಲಿ ವೈದ್ಯಕೀಯ ಪದವಿ ಪಡೆದವರು ಭಾರತದಲ್ಲಿ ವೃತ್ತಿ ಮಾಡಬೇಕು ಎಂದರೆ ‘ಫಾರಿನ್ ಮೆಡಿಕಲ್ ಗ್ರ್ಯಾಜುಯೇಟ್ಸ್ ಪರೀಕ್ಷೆ’ ಬರೆಯಬೇಕು. ಆ ಸಲುವಾಗಿ ಸಾಯಿ ಪಲ್ಲವಿ ಕೂಡ ತಿರುಚಿನಾಪಳ್ಳಿಯ ಕಾಲೇಜಿಗೆ ಹೋಗಿದ್ದರು. ಯಾರಿಗೂ ಗೊತ್ತಾಗಬಾರದು ಎಂದು ಮಾಸ್ಕ್ ಧರಿಸಿದ್ದರು. ಅದೂ ಸಾಲದೆಂಬಂತೆ ತಲೆ ಮೇಲೆ ದುಪ್ಪಟ್ಟಾ ಕೂಡ ಹೊದ್ದಿದ್ದರು. ಆದರೂ ಸಹ ಅಭಿಮಾನಿಗಳು ಅವರನ್ನು ಗುರುತಿಸಿದ್ದಾರೆ!
ಕಾಲೇಜ್ ಆವರಣದಲ್ಲಿ ತಮ್ಮ ನೆಚ್ಚಿನ ನಟಿಯನ್ನು ಕಂಡ ಎಲ್ಲ ವಿದ್ಯಾರ್ಥಿಗಳಿಗೆ ಅಚ್ಚರಿ ಆಗಿದೆ. ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಈ ಸಿಂಪಲ್ ಸುಂದರಿಯ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದಾರೆ. ಕಿಂಚಿತ್ತೂ ಬೇಜಾರು ಮಾಡಿಕೊಳ್ಳದ ಸಾಯಿ ಪಲ್ಲವಿ ಅವರು ಎಲ್ಲರಿಗೂ ನಗುಮೊಗದಿಂದಲೇ ಸೆಲ್ಫಿ ನೀಡಿದ್ದಾರೆ. ಆ ಫೋಟೋಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಪ್ರಸ್ತುತ ಸಾಯಿ ಪಲ್ಲವಿ ಕೈಯಲ್ಲಿ ಅನೇಕ ಸಿನಿಮಾಗಳಿವೆ. ನಾಗಚೈತನ್ಯ ಜೊತೆ ಅವರು ನಟಿಸುತ್ತಿರುವ ‘ಲವ್ ಸ್ಟೋರಿ’ ಸಿನಿಮಾದ ಶೂಟಿಂಗ್ ಶೀಘ್ರದಲ್ಲೇ ಆರಂಭ ಆಗಲಿದೆ. ರಾಣಾ ದಗ್ಗುಬಾಟಿ ಮತ್ತು ಪ್ರಿಯಾಮಣಿ ಜೊತೆ ಸಾಯಿ ಪಲ್ಲವಿ ತೆರೆಹಂಚಿಕೊಳ್ಳುತ್ತಿರುವ ‘ವಿರಾಟ ಪರ್ವಂ’ ಚಿತ್ರೀಕರಣ ಕೊನೇ ಹಂತದಲ್ಲಿದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.
Comments are closed.