ಕರಾವಳಿ

ಇಂದು ಕೊಂಕಣಿ ಕೆಥೋಲಿಕರಿಗೆ “ಮೊಂತಿ ಫೆಸ್ಟ್‌” ಸಂಭ್ರಮ : ಸರಳವಾಗಿ ನಡೆದ ತೆನೆಹಬ್ಬ ಆಚರಣೆ

Pinterest LinkedIn Tumblr

ಮಂಗಳೂರು, ಸೆಪ್ಟಂಬರ್.08: ಏಸು ಕ್ರಿಸ್ತರ ತಾಯಿ ಮೇರಿ ಅವರ ಜನ್ಮ ದಿನವಾದ ಇಂದು (ಸೆ.8) ಕರಾವಳಿ ಜಿಲ್ಲೆಯಾದ್ಯಂತ ಚರ್ಚ್‌ಗಳಲ್ಲಿ ಕರ್ನಾಟಕದ ಕೊಂಕಣಿ ಕೆಥೋಲಿಕರು ಮೊಂತಿ ಫೆಸ್ಟ್‌ (ತೆನೆಹಬ್ಬ)ಅನ್ನು ಭಕ್ತಿಯಿಂದ ಅದರೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿದರು.

ದ.ಕ. ಮತ್ತು ಉಡುಪಿ ಜಿಲ್ಲೆಗಳ ಕೊಂಕಣಿ ಕೆಥೋಲಿಕರು ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಶಿಷ್ಟ ರೀತಿಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಮೇರಿ ಮಾತೆಯ ಜಯಂತಿಯ ಜತೆಗೆ ಕೌಟುಂಬಿಕ ಸಮ್ಮಿಲನದ ದಿನ, ಹೊಸ ಬೆಳೆಯ ಹಬ್ಬ ಹಾಗೂ ಹೆಣ್ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ಹಬ್ಬ ಒಂಭತ್ತು ದಿನಗಳ ನೋವೆನಾ ಪ್ರಾರ್ಥನೆಯ ಬಳಿಕ ಆಚರಿಸಲಾಗುತ್ತದೆ.

ಸೆಪ್ಟೆಂಬರ್ ಮಳೆಗಾಲದ ಕೊನೆಯ ಅವಧಿಯಾಗಿದ್ದು, ಈ ಸಂದರ್ಭ ಪ್ರಕೃತಿ ಹಚ್ಚ ಹಸುರಿನಿಂದ ಕಂಗೊಳಿಸುತ್ತಿರುತ್ತದೆ. ಬೆಳೆಗಳು ಹುಲುಸಾಗಿ ಬೆಳೆದು, ನಳನಳಿಸಿ, ಕೊಯ್ಲಿಗೆ ಸಿದ್ಧವಾಗುತ್ತದೆ. ಪ್ರಕೃತಿಯ ಈ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಲು ವಿವಿಧ ಆಚರಣೆಗಳು ನಡೆಯುತ್ತವೆ. ಕರಾವಳಿಯ ಕೊಂಕಣಿ ಕೆಥೋಲಿಕರು ಪ್ರಕೃತಿಗೆ ವಿಶಿಷ್ಟ ರೀತಿಯಲ್ಲಿ ವಂದಿಸುತ್ತಾರೆ. ‘ಮೋಂತಿ ಫೆಸ್ಟ್’ ಆಗಿ ಸಂಭ್ರಮಿಸುತ್ತಾರೆ.

ಈ ಹಬ್ಬಕ್ಕೆ ಪೂರ್ವಭಾವಿಯಾಗಿ ಚರ್ಚ್‌ಗಳಲ್ಲಿ 9 ದಿನಗಳ ನೊವೇನಾ ಪ್ರಾರ್ಥನೆ ನಡೆಯುತ್ತದೆ. ನೊವೇನಾ ಪ್ರಾರ್ಥನೆಯ ವೇಳೆ ಪ್ರತಿ ದಿನ ಮಕ್ಕಳು ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ (ಬಾಲೆ ಮೇರಿಯ ಮೂರ್ತಿಗೆ) ಸಮರ್ಪಿಸಿ, ಗೀತೆಗಳನ್ನು ಹಾಡುವ ಮೂಲಕ ಸ್ತುತಿಸುತ್ತಾರೆ.

ಆದರೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿಯ ತೆನೆ ಹಬ್ಬದಲ್ಲಿ ಮೆರವಣಿಗೆ ಹಾಗೂ ಮಕ್ಕಳಿಂದ ಹೂಗಳನ್ನು ಅರ್ಪಿಸುವಂತಹ ಕೆಲವು ಆಚರಣೆಗಳು ರದ್ದುಗೊಳಿಸಲಾಗಿತ್ತು. ಕೆಲವು ಮಂದಿಗಷ್ಟೆ ಮೇರಿ ಮಾತೆಗೆ ಹೂ ಅರ್ಪಿಸಲು ಅವಕಾಶ ನೀಡಲಾಯಿತು.

ಕೊನೆಯ ದಿನ ಅಂದರೆ ಸೆ.8ರಂದು ಹಬ್ಬದ ಸಂಭ್ರಮ. ಚರ್ಚ್‌ಗಳಲ್ಲಿ ಬಲಿ ಪೂಜೆ, ಹೊಸ ತೆನೆಯ ಆಶೀರ್ವಚನ ಮತ್ತು ವಿತರಣೆ, ಧರ್ಮ ಗುರುಗಳಿಂದ ಹಬ್ಬದ ಸಂದೇಶ, ಕ್ರೈಸ್ತರಿಂದ ಹಬ್ಬದ ಶುಭಾಶಯ ವಿನಿಮಯ, ಸಿಹಿ ತಿಂಡಿ ಮತ್ತು ಕಬ್ಬು ವಿತರಣೆ ಹಾಗೂ ಬಳಿಕ ಮನೆಗಳಲ್ಲಿ ಕೌಟುಂಬಿಕವಾಗಿ ಹಬ್ಬದ ಭೋಜನ ಕಾರ್ಯಕ್ರಮ ನಡೆಯುತ್ತದೆ.

ಮಂಗಳೂರು ಧರ್ಮ ಪ್ರಾಂತದ ಬಿಷಪ್ ಅತಿ ವಂ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಇಂದು ಬೆಳಗ್ಗೆ ನಗರದ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಹಬ್ಬದ ಬಲಿ ಪೂಜೆಯನ್ನು ನಡೆಸಿದರು. ಇದೇ ವೇಳೆ ಧರ್ಮ ಪ್ರಾಂತದ ಎಲ್ಲಾ 124 ಚರ್ಚ್‌ಗಳಲ್ಲಿ ಬೆಳಗ್ಗೆ ಬಲಿ ಮೊಂತಿ ಹಬ್ಬದ ಬಲಿಪೂಜೆಗಳು ನಡೆಯಿತು.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಈ ಬಾರಿ ಚರ್ಚ್‌ಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಯಿತು. ಚರ್ಚ್‌ನ ಒಳಗಡೆ ಕೆಲವು ಮಂದಿಗಷ್ಟೆ ಅವಕಾಶ ಕಲ್ಪಿಸಲಾಗಿತ್ತು. ಇದರೊಂದಿಗೆ ಮಾಸ್ಕ್‌‌ ಧರಿಸುವುದು ಕೂಡಾ ಕಡ್ಡಾಯವಾಗಿತ್ತು. ಪಾಲ್ಗೊಂಡ ಎಲ್ಲರನ್ನು ಥರ್ಮಲ್‌‌ ಸ್ಕ್ಯಾನರ್‌ನಿಂದ ತಪಾಸಣೆ ಮಾಡಲಾಯಿತು.

ಇನ್ನು ಚರ್ಚ್ ಒಳಗಡೆ ಪ್ರವೇಶ ಮಾಡುವ ಮುನ್ನ ಸ್ಯಾನಿಟೈಸರ್‌‌ ನೀಡಲಾಗಿದ್ದು, ಕೊರೊನಾ ಸೋಂಕು ಹಿನ್ನೆಲೆಯಲ್ಲಿ 10 ವರ್ಷದೊಳಗಿನ ಹಾಗೂ 60ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಚರ್ಚ್ ಪ್ರವೇಶಕ್ಕೆ ಅನುಮತಿ ನಿರಾಕರಿಸಲಾಗಿತ್ತು.

Comments are closed.