ಅಂತರಾಷ್ಟ್ರೀಯ

ಆಸ್ಟ್ರೇಲಿಯಾದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಭಾರತೀಯ ಮೂಲದ ವಿದ್ಯಾರ್ಥಿ

Pinterest LinkedIn Tumblr

ಹೈದರಾಬಾದ್: ಆಸ್ಟ್ರೇಲಿಯಾದ ಲಿಸ್ಮೋರ್‌ನ ದಕ್ಷಿಣದ ಕ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದ ತೆಲಂಗಾಣದ ವಿಕರಾಬಾದ್ ಜಿಲ್ಲೆಯ ವಿದ್ಯಾರ್ಥಿಯೊಬ್ಬ ಸೋಮವಾರ ರಾತ್ರಿ ಅನುಮಾನಾಸ್ಪದವಾಗಿ ಬಾತ್‍ರೂಮಿನಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಮೃತ ವಿದ್ಯಾರ್ಥಿಯನ್ನು ಧಾರೂರು ಮಂಡಲದ ಹರಿದಾಸ್ಪಲ್ಲಿ ಗ್ರಾಮದ ನಿವಾಸಿ ಹರಿ ಶಿವಶಂಕರ್ ರೆಡ್ಡಿ (22) ಎಂದು ಗುರುತಿಸಲಾಗಿದೆ. ಹರಿ ಬಾತ್‍ರೂಮಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ಅದನ್ನು ನೋಡಿದ ಆತನ ಸಹಪಾಠಿಗಳು ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿಯೇ ಹರಿ ಮೃತಪಟ್ಟಿದ್ದನು.

ಹರಿ ಲಿಸ್ಮೋರ್‌ನ ದಕ್ಷಿಣದ ಕ್ರಾಸ್ ವಿಶ್ವವಿದ್ಯಾಲಯದಲ್ಲಿ ಎಂಎಸ್ ವ್ಯಾಸಂಗ ಮಾಡುತ್ತಿದ್ದನು. ನಾಗೇಂದ್ರಮ್ಮ ಮತ್ತು ಸಾಯಿ ರೆಡ್ಡಿಯ ಪುತ್ರನಾಗಿದ್ದು, ಒಬ್ಬನೇ ಮಗ ಎಂದು ತಿಳಿದುಬಂದಿದೆ.

ಹರಿ ಸ್ನೇಹಿತರು ಸೋಮವಾರ ರಾತ್ರಿ 10.45ಕ್ಕೆ ಫೋನ್ ಮಾಡಿದ್ದರು. ಆಗ ಹರಿ ಬಾತ್‍ರೂಮಿನಲ್ಲಿ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ ಅಂತ ಹೇಳಿದ್ದರು. ಆದರೆ ಸ್ವಲ್ಪ ಸಮಯದ ನಂತರ ಆಸ್ಪತ್ರೆಯ ಅಧಿಕಾರಿಗಳು ಫೋನ್ ಮಾಡಿ ಹರಿ ಮೃತಪಟ್ಟಿದ್ದಾನೆ ಅಂತ ಹೇಳಿರುವುದಾಗಿ ಕುಟುಂಬದವರು ತಿಳಿಸಿದ್ದಾರೆ.

ನಮ್ಮ ಮಗನ ಸ್ನೇಹಿತರು ಫೋನ್ ಮಾಡಿ ಸಾವಿನ ಬಗ್ಗೆ ನಮಗೆ ಮಾಹಿತಿ ನೀಡಿದರು. ಬೆಳಗ್ಗೆಯಿಂದ ಹರಿ ತಲೆನೋವಿನಿಂದ ಬಳಲುತ್ತಿದ್ದನು. ಆದರೆ ಸ್ನಾನ ಮಾಡಲು ಹೋದಾಗ ಕುಸಿದು ಬಿದ್ದಿದ್ದಾನೆ ಎಂದು ಹೇಳಿದರು. ನಂತರ ಅವರು ಅಂಬುಲೆನ್ಸ್‌ಗೆ ಫೋನ್ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು ಎಂದು ಹರಿ ತಂದೆ ಸಾಯಿ ರೆಡ್ಡಿ ತಿಳಿಸಿದರು.

ಹರಿ ಸಾವಿಗೂ ಒಂದು ದಿನ ಮುಂಚಿತವಾಗಿ ನಮಗೆ ಫೋನ್ ಮಾಡಿ ಮಾತನಾಡಿದ್ದನು. ಈ ವೇಳೆ ನಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದ್ದನು. ಆದರೆ ತನ್ನ ಆರೋಗ್ಯದ ಬಗ್ಗೆ ಏನನ್ನೂ ಹೇಳಿಕೊಂಡಿಲ್ಲ ಎಂದು ತಾಯಿ ನಾಗೇಂದ್ರಮ್ಮ ಹೇಳಿದರು. ಸದ್ಯಕ್ಕೆ ಹರಿ ಮೃತದೇಹವನ್ನು ತಮ್ಮ ನಿವಾಸಕ್ಕೆ ತರಲು ಸಹಾಯ ಮಾಡಬೇಕೆಂದು ಕುಟುಂಬದವರು ತೆಲಂಗಾಣ ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ.

Comments are closed.