ಪಾಟ್ನಾ: ಯುವಕನೊಬ್ಬನಿಂದ ಅತ್ಯಾಚಾರಕ್ಕೊಳಗಾದ ಅಪ್ರಾಪ್ತೆಯೊಬ್ಬಳು ನ್ಯಾಯ ಕೇಳಲು ಹೋಗಿ ಕಿಶಾನ್ ಗಂಜ್ ಎಸ್ ಪಿ ಕಚೇರಿಯ ಹೊರಗಡೆ ಹೆಣ್ಣುಮಗುವಿಗೆ ಜನ್ಮ ನೀಡಿರುವ ಘಟನೆ ವರದಿಯಾಗಿದೆ.
ಪಹಾದಕಟ್ಟಾ ಪೊಲೀಸ್ ಠಾಣೆ ವ್ಯಾಪ್ತಿಯ ನೆರೆಯ ಗ್ರಾಮದ ಮುನ್ನಾ ಕುಮಾರ್ ಎಂಬ ಯುವಕ, ಮದುವೆಯಾಗುವುದಾಗಿ ಈಕೆಯನ್ನು ದೈಹಿಕವಾಗಿ ಬಳಸಿಕೊಂಡಿದ್ದು, ಆಕೆ ಗರ್ಭೀಣಿಯಾದಾಗ ಮದುವೆಗೆ ನಿರಾಕರಿಸಿದ್ದಾನೆ.
ನಂತರ, ಸಂತ್ರಸ್ತೆ ಈ ವಿಷಯವನ್ನು ಮನೆಯವರಿಗೆ ತಿಳಿಸಿದ್ದಾಳೆ. ಆದರೆ, ಆಕೆಯ ಅಪ್ಪ ಆರೋಪಿಯ ಮನೆಗೆ ಹೋಗಿ ಘಟನೆ ಬಗ್ಗೆ ವಿವರಿಸಿದಾಗ ಆರೋಪಿ ಥಳಿಸಿದ್ದಾನೆ. ನಂತರ ಹಲವು ಬಾರಿ ರಾಜಿ ಪಂಚಾಯಿತಿ ನಡೆದು ನ್ಯಾಯ ಪಡೆಯಲು ಆಕೆಯ ಮನೆಯವರು ಪ್ರಯತ್ನಿಸಿದ್ದಾರೆ. ಆದರೆ, ಅಲ್ಲೂ ಕೂಡಾ ನ್ಯಾಯ ದೊರೆಯದೇ ಇದ್ದಾಗ ತಮ್ಮ ಕಚೇರಿಗೆ ಬಂದಿದ್ದಾಗಿ ಎಸ್ ಪಿ ಕುಮಾರ್ ಅಶಿಶ್ ಹೇಳಿದ್ದಾರೆ.
ಹೆರಿಗೆಯ ನಂತರ ಅಶಿಶ್ ಅಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿ ತಲೆ ಮರೆಸಿಕೊಂಡಿದ್ದು, ಈ ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ ರಚಿಸಲಾಗುವುದು, ಸದ್ಯ ತಾಯಿ ಮತ್ತು ಮಗು ಆರೋಗ್ಯದಿಂದ ಇರುವುದಾಗಿ ಎಸ್ ಪಿ ಕುಮಾರ್ ಅಶಿಶ್ ತಿಳಿಸಿದ್ದಾರೆ.
Comments are closed.