ಕರಾವಳಿ

ನಾಡೋಜ ಡಾ|| ಎಸ್.ಎಲ್.ಭೈರಪ್ಪನವರಿಗೆ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ

Pinterest LinkedIn Tumblr

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ(ರಿ) ಕೋಟ ಅವರು 2020ನೇ ಸಾಲಿನ ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕನ್ನಡ ನಾಡಿನ ಖ್ಯಾತ ಬರಹಗಾರ, ಪದ್ಮ ಶ್ರೀ ಪುರಸ್ಕೃತ , ನಾಡೋಜ ಡಾ.ಎಸ್ ಎಲ್ ಭೈರಪ್ಪನವರಿಗೆ ನೀಡಲು ನಿರ್ಧರಿಸಿದ್ದಾರೆ. ಮಾನ್ಯ ಭೈರಪ್ಪನವರು ಈ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಗೆ ನೀಡಿದ್ದಾರೆ. ಈ ಪ್ರಶಸ್ತಿ ಕಾರಂತರ ಜನ್ಮ ದಿನವಾದ ಅಕ್ಟೋಬರ್ 10 ರಂದು ನೀಡಲಾಗುತ್ತದೆ.

ಕಳೆದ ಹದಿನೈದು ವರುಷಗಳಿಂದ ಕಾರಂತರ ವಿವಿಧ ಆಸಕ್ತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಡಾ|| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ನೀಡುತ್ತಾ ಬಂದಿದ್ದು, ಕಾರಂತ ಆಸಕ್ತಿ ಕ್ಷೇತ್ರವಾದ ಸಾಹಿತ್ಯ ಕ್ಷೇತ್ರದಿಂದ ಆಯ್ಕೆ ಮಾಡಲಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಎಸ್. ಎಲ್ ಭೈರಪ್ಪನವರ ಗಣನೀಯ ಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೀರಪ್ಪ ಮೊಯ್ಲಿ, ವೇಂಕಟಾಚಲ, ಕೆ.ರಾಮಕೃಷ್ಣ ಹಂದೆ, ರವಿ ಬೆಳಗೆರೆ, ಗಿರೀಶ್ ಕಾಸರವಳ್ಳಿ, ಜಯಶ್ರೀ, ಮೋಹನ್ ಆಳ್ವ, ಸಾಲು ಮರದ ತಿಮ್ಮಕ್ಕ, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಯಂತ್ ಕಾಯ್ಕಿಣಿ, ಸದಾನಂದ ಸುವರ್ಣ, ಡಾ. ಬಿ.ಎಮ್ ಹೆಗ್ಡೆ, ಪ್ರಕಾಶ್ ರೈ, ಶ್ರೀಪಡ್ರೆ, ಕವಿತಾ ಮಿಶ್ರರವರಿಗೆ ಹುಟ್ಟೂರ ಪ್ರಶಸ್ತಿ ನೀಡಲಾಗಿದೆ.

ಈ ಬಾರಿ ಕಾರಂತ ಜನ್ಮ ದಿನೋತ್ಸವದ ಅಂಗವಾಗಿ ಆನ್ ಲೈನ್ ಸಾಂಸ್ಕೃತಿಕ-ಸಾಹಿತ್ಯಿಕ ಸುಗ್ಗಿ ಆಲ್ಮೋರ-2020 ನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಯಕ್ಷ-ಗಾನ-ನೃತ್ಯ ವೈಭವದಂತಹ ಕಾರ್ಯಕ್ರಮವನ್ನು ಕೋವಿಡ್ ಮುಂಜಾಗ್ರತ ಕ್ರಮದೊಂದಿಗೆ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾ ಗೋಷ್ಠಿಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಶೆಟ್ಟಿ, ಆಡಳಿತಾಧಿಕಾರಿ , ಆಯ್ಕೆ ಸಮಿತಿ ಸದಸ್ಯರಾದ ಯು.ಎಸ್ ಶೆಣೈ, ಕೋಟ ಕಾರಂತ ಪ್ರತಿಷ್ಠಾನ (ರಿ) ಟ್ರಸ್ಟಿ ಸುಬ್ರಾಯ್ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೈಲಾ. ಎಸ್ ಪೂಜಾರಿ, ಕೋಟ ಕಾರಂತ ಥೀಮ್ ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.

ಎಸ್ ಎಲ್ ಭೈರಪ್ಪನವರ ಬಗ್ಗೆ….
ಡಾ|| ಎಸ್.ಎಲ್. ಭೈರಪ್ಪ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತಾದ್ಯಂತ ಸಾಹಿತ್ಯಾಸಕ್ತರಿಗೆ ಚಿರಪರಿಚಿತ ಹೆಸರು. ಕನ್ನಡ ಕಾದಂಬರಿ ಸಾಹಿತ್ಯವನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುತ್ತಿರುವ ಕೀರ್ತಿ ಇವರಿಗೆ ಸಲ್ಲುತ್ತದೆ. ಕನ್ನಡ ಸಾರಸ್ವತ ಲೋಕಕ್ಕೆ ಮೊದಲ ಸರಸ್ವತಿ ಸಮ್ಮಾನ್ ಪ್ರಶಸ್ತಿಯ ಗೌರವವನ್ನು ತಂದುಕೊಟ್ಟ ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪನವರ ಕಾದಂಬರಿಗಳು ಭಾರತದ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿವೆ. ಜ್ಞಾತಕಲಾವಿದರಾದ ಭೈರಪ್ಪನವರ ಕಾದಂಬರಿಗಳ ಕಥಾವಸ್ತು ಮಾನವಸಹಜಸಂವೇದನಗಳ ಸುತ್ತ ಹೊಸೆದುಕೊಂಡಿರುತ್ತವೆ. ತಮ್ಮ ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿಯ ಆಳವಾದ ಅಧ್ಯಯನದೊಂದಿಗೆ, ಬಾಲ್ಯದ ಗ್ರಾಮೀಣಜೀವನ ಮತ್ತು ಮಹಾನಗರದ ಬದುಕನ್ನು ಅವರು ಹತ್ತಿರದಿಂದ ಕಂಡವರು. ಅಧ್ಯಯನ ಮತ್ತು ಜೀವನಾನುಭವ ಮಿಳಿತಗೊಂಡು ಸೃಷ್ಟಿಯಾಗುವ ಅವರ ಕಾದಂಬರಿಯ ಪಾತ್ರಗಳು ತಮ್ಮ ಬೇರುಗಳನ್ನು ಭಾರತೀಯ ನೆಲದಲ್ಲಿ ಕಂಡುಕೊಳ್ಳುತ್ತವೆ.

ಕರ್ನಾಟಕ ಆದಿಯಾಗಿ ಭಾರತ ಮತ್ತು ವಿದೇಶಗಳಲ್ಲೂ ಅವರ ಕಾದಂಬರಿಗಳ ಕುರಿತಾದ ವಿಚಾರಗೋಷ್ಠಿಗಳು ನಡೆದು, ಅವರ ಕಾದಂಬರಿಗಳ  ಅಧ್ಯಯನ ಗ್ರಂಥ ಸಂಪುಟಗಳು ಹೊರಬಂದಿವೆ. ಭೈರಪ್ಪನವರ ಕಾದಂಬರಿಗಳು ಕರ್ನಾಟಕದ ಹಲವು ವಿಶ್ವವಿದ್ಯಾಲಯಗಳ  ಪಾಠ್ಯಗಳಾಗಿ ಸ್ಥಾನವನ್ನು ಪಡೆದಿರುವುದಲ್ಲೆದೆ, ೨೦ಕ್ಕೂ ಹೆಚ್ಚು ಸಂಶೋಧನಾ ವಿದ್ಯಾರ್ಥಿಗಳ ಅಧ್ಯಯನದ ವಿಷಯವೂ ಆಗಿವೆ. ಭೈರಪ್ಪನವರ ೨೪ ಕಾದಂಬರಿಗಳನ್ನೂ ಹಾಗೂ ಸಾಹಿತ್ಯವಿಮರ್ಶೆ, ಸೌಂದರ್ಯಮೀಮಾಂಸೆ ಮತ್ತು ಸಂಸ್ಕೃತಿಯ ಕುರಿತಾಗಿ ೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಬಹುತೇಕ ಕಾದಂಬರಿಗಳು ಭಾರತದ ಹದಿನಾಲ್ಕು ಭಾಷೆಗಳಿಗೂ ಅನುವಾದಗೊಂಡು, ಆರು ಕಾದಂಬರಿಗಳು ಇಂಗ್ಲೀಷಿಗೆ ಅನುವಾದಗೊಂಡಿವೆ. ಅವರು ಮೂರು ದಶಕಳಿಗೂ ಹೆಚ್ಚು ಕಾಲ ಎನ್.ಸಿ.ಈ.ಆರ್.ಟಿ ಯಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಭೈರಪ್ಪನವರು ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತಾಸಕ್ತರಾಗಿರುವುದರೊಂದಿಗೆ ಚಿತ್ರ ಮತ್ತು ಶಿಲ್ಪಕಲೆಯಲ್ಲೂ ಅಭಿರುಚಿ ಹೊಂದಿದ್ದಾರೆ. ಬಾಲ್ಯದಿಂದಲೇ ಪ್ರವಾಸದ ಗೀಳು ಹತ್ತಿಸಿಕೊಂಡಿದ್ದ ಇವರು, ಉತ್ತರ ಮತ್ತು ದಕ್ಷಿಣ ದೃವಗಳೂ ಒಳಗೊಂಡಂತೆ ವಿಶ್ವದ ಏಳೂ ಭೂಖಂಡಗಳಲ್ಲಿ ಪ್ರವಾಸ ಮಾಡಿದ್ದಾರೆ.

Comments are closed.