ಲಂಡನ್: ಸಾಲದ ಸುಳಿಯಲ್ಲಿ ಸಿಲುಕಿರುವ ಅನಿಲ್ ಅಂಬಾನಿ ನ್ಯಾಯಾಲಯದ ಶುಲ್ಕ ಪಾವತಿಸಲಾಗದೆ ತಮ್ಮ ಎಲ್ಲ ಆಭರಣಗಳನ್ನು ಮಾರಿರುವುದಾಗಿ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದಾರೆ.
ನಾನೀಗ ಕನಿಷ್ಠ ಜೀವನ ನಡೆಸುತ್ತಿದ್ದೇನೆ. ನನ್ನ ಬಳಿ ನ್ಯಾಯಾಲಯದ ಶುಲ್ಕ ಪಾವತಿಸಲೂ ಹಣವಿಲ್ಲದ ಕಾರಣ ನನ್ನ ಬಳಿ ಇದ್ದ ಎಲ್ಲ ಆಭರಣಗಳನ್ನೂ ಮಾರಿದ್ದೇನೆ. ಕಳೆದ ಜನವರಿಯಿಂದ ಜೂನ್ ವರೆಗೆ ಆಭರಣ ಮಾರಿದ್ದರಿಂದಲೇ 9.9 ಕೋಟಿ ರೂಪಾಯಿ ದೊರೆತಿದೆ. ಪ್ರಸ್ತುತ ನನ್ನ ಸ್ವಂತದ್ದೆಂದು ಏನೂ ಉಳಿದಿಲ್ಲ ಎಂದು ಬ್ರಿಟನ್ ನ್ಯಾಯಾಲಯದಲ್ಲಿ ಅಲವತ್ತುಕೊಂಡಿದ್ದಾರೆ.
ನಿಮ್ಮ ಬಳಿ ಐಶಾರಾಮಿ ಕಾರುಗಳಿವೆಯಲ್ಲ ಎಂಬ ನ್ಯಾಯಾಲಯದ ಪ್ರಶ್ನೆಗೆ ಉತ್ತರಿಸಿದ ಅನಿಲ್ ಅಂಬಾನಿ, ಇವೆಲ್ಲವೂ ಮಾಧ್ಯಮಗಳ ಊಹಾತ್ಮಕ ವರದಿಗಳು. ನನ್ನ ಬಳಿ ರೋಲ್ಸ್ ರಾಯ್ ಕಾರು ಇಲ್ಲ. ಈಗ ಕೇವಲ ಒಂದೇ ಒಂದು ಕಾರು ಇರುವುದಾಗಿ ತಿಳಿಸಿದ್ದಾರೆ.
ಅನಿಲ್ ಅಂಬಾನಿ ಅವರು ಚೀನಾದ ಮೂರು ಬ್ಯಾಂಕುಗಳಿಗೆ 2020ರ ಜೂನ್ 12ರೊಳಗೆ ಬಾಕಿ ಇರುವ 5281 ಕೋಟಿ ರೂಪಾಯಿ ಸಾಲದ ಮೊತ್ತವನ್ನು ಪಾವತಿಸುವಂತೆ ಬ್ರಿಟನ್ ಹೈಕೋರ್ಟ್ ತಿಳಿಸಿತ್ತು. ಇದರ ಜತೆಗೆ 7 ಕೋಟಿ ರೂಪಾಯಿ ಕಾನೂನು ವೆಚ್ಚವನ್ನು ಪಾವತಿಸುವಂತೆ ಮೇ 22ರಂದು ಆದೇಶಿಸಿತ್ತು. ಆದರೆ ಅನಿಲ್ ಅಂಬಾನಿ ಅವರು ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಲು ವಿಫಲರಾದ ಕಾರಣ, ಚೀನಾ ಬ್ಯಾಂಕುಗಳು ಅಂಬಾನಿ ಆಸ್ತಿಯ ವಿವರಣೆ ಕೋರಿದ್ದವು.
ಅನಿಲ್ ಅಂಬಾನಿ ಭಾರತದಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ವಿಚಾರಣೆ ವೇಳೆ ತಮ್ಮ ತಾಯಿಗೆ 500 ಕೋಟಿ ರೂಪಾಯಿ ಹಾಗೂ ತಮ್ಮ ಮಗ ಅನುಮೋಲ್ಗೆ 310 ಕೋಟಿ ರೂಪಾಯಿ ಸಾಲ ಮರುಪಾವತಿಸಬೇಕಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಅನಿಲ್ ಅಂಬಾನಿ ಅವರ ಸಾಲ ವಸೂಲಿ ಪ್ರಕರಣ ಕುರಿತಂತೆ ವಿಚಾರಣೆ ನಡೆಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಕೊನೆಗೂ ಒಪ್ಪಿಗೆ ನೀಡಿದೆ.
Comments are closed.