ಕರ್ನಾಟಕ

ದಲಿತ ಸಮುದಾಯದಿಂದ ಉಕ್ಕಿ ಹರಿಯುವ ನೀರಿನಲ್ಲಿ ಜೀವದ ಹಂಗು ತೊರೆದು ಶವ ಹೊತ್ತೊಯ್ದು ಅಂತ್ಯಕ್ರಿಯೆ

Pinterest LinkedIn Tumblr


ಯಾದಗಿರಿ: ದಲಿತ ಸಮುದಾಯವೊಂದು ಉಕ್ಕಿಹರಿಯುವ ನೀರಿನಲ್ಲಿಯೇ ಜೀವದ ಹಂಗು ತೊರೆದು ಶವ ಹೊತ್ತೊಯ್ದು ಅಂತ್ಯಕ್ರಿಯೆ ಮಾಡಿರುವ ಘಟನೆ ನಡೆದಿದೆ..

ದಲಿತ ಸಮುದಾಯದ ಜನರು ಯಾರಾದರೂ ಸತ್ತರೆ ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಮೊದಲು ಚಿಂತೆ ಮಾಡಿ, ಬಳಿಕ ಅನಿವಾರ್ಯವಾಗಿ ಉಕ್ಕಿಹರಿಯುವ ಹಳ್ಳದ ನೀರಿನಲ್ಲಿ ಶವ ಹೊತ್ತುಕೊಂಡು ಹೋಗಿ ಅಂತಿಮಸಂಸ್ಕಾರ ಮಾಡಬೇಕಾಗಿದೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ಮೀನಾಸಪುರ ಗ್ರಾಮದಲ್ಲಿ ದಲಿತ ಸಮುದಾಯದ ವ್ಯಕ್ತಿಗಳು ಮೃತಪಟ್ಟರೆ ಜನರು ನರಕಯಾತನೆ ಅನುಭವಿಸುವಂತಾಗಿದೆ. ಯಾಕೆಂದರೆ ಪ್ರತಿ ವರ್ಷ ಮಳೆಗಾಲದಲ್ಲಿ ಹಳ್ಳ ಉಕ್ಕಿ ಹರಿಯುತ್ತದೆ. ಹಳ್ಳದಾಚೆ ಜಮೀನು ಪ್ರದೇಶವಿದ್ದು ನೀರಿನಲ್ಲಿಯೇ ಶವ ತೆಗೆದುಕೊಂಡು ‌ಹೋಗಿ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಕಳೆದ ತಿಂಗಳ 28ರಂದು ಗ್ರಾಮದ ತಮ್ಮಪ್ಪ ಮೃತಪಟ್ಟ ನಂತರ ಹಳ್ಳದ ನೀರಿನಲ್ಲಿಯೇ ಶವ ಹೊತ್ತೊಯ್ದು ಅಂತ್ಯಕ್ರಿಯೆ ಮಾಡಿದ್ದಾರೆ.

ಮಾಧ್ಯಮವೊಂದಕ್ಕೆ ಗ್ರಾಮಸ್ಥ ಆನಂದ ಮಾತನಾಡಿ, ಪ್ರತಿ ವರ್ಷ ಮಳೆಗಾಲದಲ್ಲಿ ಯಾರಾದರೂ ಸತ್ತರೆ ಹಳ್ಳದ ನೀರಿನಲ್ಲಿ ಹೊತ್ತೊಯ್ದು ಅಂತ್ಯಕ್ರಿಯೆ ಮಾಡಲಾಗುತ್ತದೆ. ರುದ್ರಭೂಮಿ ಮಂಜೂರು ಮಾಡಬೇಕು ಹಾಗೂ ಸೇತುವೆ ನಿರ್ಮಾಣ ಮಾಡಿದರೆ ಹೊಲಕ್ಕೆ ಹೋಗಲು ಹಾಗೂ ಶವ ತೆಗೆದುಕೊಂಡು ಹೋಗಲು ಸಹಾಯವಾಗಲಿದೆ ಎಂದರು.

ಹಳ್ಳದಾಚೆ ಜಮೀನಿದ್ದು ಗ್ರಾಮಸ್ಥರು ‌ಜಮೀನಿನ‌ ಕೆಲಸ ಮಾಡಲು ಮಳೆಗಾಲದಲ್ಲಿ ಸಂಕಷ್ಟ ಎದುರಿಸುತ್ತಿದ್ದಾರೆ. ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಸಾಕಷ್ಟು ಬಾರಿ ಒತ್ತಾಯ ಮಾಡಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ.

ಈ ಬಗ್ಗೆ ಗುರುಮಠಕಲ್ ತಹಶೀಲ್ದಾರ ಸಂಗಮೇಶ ಜಿಡಗೆ ಮಾತನಾಡಿ, ಈ ಬಗ್ಗೆ ನನ್ನ ಗಮನಕ್ಕೆ ಬಂದಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮವಹಿಸಲಾಗುತ್ತದೆ ಎಂದರು.

ಕೂಡಲೇ ಅಧಿಕಾರಿಗಳು ಜಾಣಮೌನ ವಹಿಸದೆ ಗ್ರಾಮಕ್ಕೆ ಭೇಟಿ ನೀಡಿ ರುದ್ರಭೂಮಿ ಮಂಜೂರು ಮಾಡುವ ಜೊತೆ ಸೇತುವೆ ನಿರ್ಮಾಣ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ.

Comments are closed.