ಮಂಗಳೂರು / ಸುರತ್ಕಲ್ : ಮುಕ್ಕ ಟೋಲ್ ಗೇಟ್ ಸಮೀಪ ಹೆದ್ದಾರಿ ಬದಿ ಸಣ್ಣಪುಟ್ಟ ಮಾಡು ನಿರ್ಮಿಸಿ ಮೀನು ವ್ಯಾಪಾರ ನಡೆಸುತ್ತಿದ್ದ ಬಡ ಮೀನು ವ್ಯಾಪಾರಿಗಳ ಮೀನು ಮಾರಾಟದ ಸ್ಟಾಲ್ ಗಳನ್ನು ಸುರತ್ಕಲ್ ಅರೋಗ್ಯ ಇಲಾಖೆ ಅಧಿಕಾರಿ ನೇತೃತ್ವದ ತಂಡ ಏಕಾಏಕಿ ನೆಲಸಮ ಮಾಡಿರುವ ಘಟನೆ ನಡೆದಿದ್ದು, ಇದನ್ನುಖಂಡಿಸಿ ಸ್ಥಳೀಯ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ.
ಲಾಕ್ ಡೌನ್ ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದ ಬಡ ಮೀನು ವ್ಯಾಪಾರಿಗಳು ಸುರತ್ಕಲ್ ಮನಪಾ ವಾರ್ಡ್ 2 ವ್ಯಾಪ್ತಿಯಲ್ಲಿ ಮುಕ್ಕ ಟೋಲ್ ಗೇಟ್ ನಿಂದ 300 ಮೀ. ದೂರದ ಪಡ್ರೆ ದೈವಸ್ಥಾನ ದ್ವಾರದ ವಿರುದ್ಧ ದಿಕ್ಕಿನ ನೂರು ಮೀ. ಅಂತರದಲ್ಲಿ ಹೆದ್ದಾರಿ ಬದಿ ಸಣ್ಣಪುಟ್ಟ ಮಾಡು ನಿರ್ಮಿಸಿ ವ್ಯಾಪಾರ ಮಾಡಿ ಬದುಕು ಕಟ್ಟಿಕೊಂಡಿದ್ದರು.
ಆದರೆ ನಿನ್ನೆ ಮುಂಜಾನೆ ಸ್ಥಳೀಯ ಕಾರ್ಪೊರೇಟರ್‌ಗೂ ಮಾಹಿತಿ ಕೊಡದೆ ಸುರತ್ಕಲ್ ಅರೋಗ್ಯ ಇಲಾಖೆ ಅಧಿಕಾರಿ ನೇತೃತ್ವದ ತಂಡಕಾರ್ಯಾಚರಣೆ ನಡೆಸಿ ಮೀನು ಮಾರಾಟದ ಸ್ಟಾಲ್ ಗಳನ್ನು ನೆಲಸಮ ಮಾಡಿದ್ದಾರೆ.
ವಾರ್ಡ್ ನಂಬರ್ ಎರಡರ ಸ್ಥಳೀಯ ಕಾರ್ಪೊರೇಟರ್ ಶ್ವೇತಾ ಪೂಜಾರಿ ಅವರಿಗೆ ಮಾಹಿತಿ ನೀಡದೆಯೇ ಬಡ ವ್ಯಾಪಾರಿಗಳ ತಾತ್ಕಾಲಿಕ ಶೆಡ್ ಧ್ವಂಸ ಕಾರ್ಯಾಚರಣೆ ನಡೆದಿರುವುದಕ್ಕೆ ಪಕ್ಷದೊಳಗಿನ ರಾಜಕೀಯ ಕಾರಣ ಎಂದು ಹೇಳಲಾಗುತ್ತಿದೆ.
ಘಟನೆಯನ್ನು ಖಂಡಿಸಿ ಸ್ಥಳೀಯ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮೀನಿನ ವಾಸನೆ ಬರುತ್ತದೆ ಎಂದು ದೂರು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕ್ರಮಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ ಎಂದು ತಿಳಿಸಿರುವ ಸುರತ್ಕಲ್ ವಲಯ ಹಿರಿಯ ಆರೋಗ್ಯಾಧಿಕಾರಿ ಸುಶಾಂತ್ ಅವರು ತಮಗೆ ಡಿಸಿ ಆದೇಶವಿದೆ ಎಂದು ಡಿಸಿ ಆದೇಶ ಪ್ರತಿಯನ್ನು ಪ್ರದರ್ಶಿಸಿದ್ದಾರೆ.
ಆದರೆ ವಾಸ್ತವದಲ್ಲಿ ಜಿಲ್ಲಾಧಿಕಾರಿಗಳು ನೀಡಿದ ಆದೇಶದಲ್ಲಿ “ಗಮನಿಸಿ ಕ್ರಮ ಕೈಗೊಳ್ಳಿ” ಎಂದಷ್ಟೇ ಹೇಳಿದ್ದು ಹೀಗಾದರೆ ತೆರವು ಕಾರ್ಯಾಚರಣೆ ನಡೆದಿದ್ದೇಕೆ ಎಂಬ ಪ್ರಶ್ನೆ ಇಲ್ಲಿ ಎದುರಾಗಿದೆ. ಇದೇ ವೇಳೆ ಮಹೇಶ್ ಅಂಚನ್ ಎನ್ ಐಟಿಕೆ ಎಂಬವರು ನೀಡಿದ ದೂರಿನಂತೆ ವ್ಯಾಪಾರಿಗಳನ್ನು ಬೀದಿಪಾಲು ಮಾಡಿದ ಆರೋಗ್ಯಾಧಿಕಾರಿ ಅವರನ್ನು ಸಾರ್ವಜನಿಕರು ತರಾಟೆಗೆತ್ತಿಕೊಂಡ ಘಟನೆಯೂ ನಡೆಯಿತು.
ಕಾರ್ಯಾಚರಣೆ ಬಗ್ಗೆ ಸ್ಥಳೀಯ ಕಾರ್ಪೊರೇಟರ್‌ಗೆ ಮಾಹಿತಿ ಇಲ್ಲ!
ಸುರತ್ಕಲ್ ಎರಡನೇ ವಾರ್ಡ್ ಕಾರ್ಪೊರೇಟರ್ ಶ್ವೇತಾ ಅವರು ಜನರ ಜೊತೆಗೆ ಬೆರೆತು ಕೆಲಸ ಮಾಡುತ್ತಿದ್ದು ಅವರ ಕಾರ್ಯವೈಖರಿ ಬಗ್ಗೆ ಜನರಿಗೆ ಮೆಚ್ಚುಗೆಯಿದೆ. ಆದರೆ ನಿನ್ನೆ ಏಕಾಏಕಿ ಕಾರ್ಪೊರೇಟರ್ ಅವರಿಗೆ ಮಾಹಿತಿ ನೀಡದೆ ಕಾರ್ಯಾಚರಣೆ ನಡೆಸಿರುವುದು ವ್ಯಾಪಕ ಅನುಮಾನ ಹುಟ್ಟಿಸಿದೆ. ಕಾರ್ಪೊರೇಟರ್ ಹೆಸರಿಗೆ ಮಸಿ ಬಳಿಯಲು ಪಕ್ಷದೊಳಗೆ ಪಿತೂರಿ ನಡೆದಿರುವುದು, ಇದಕ್ಕೆ ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಸಹಕಾರ ಕೂಡಾ ಇದೆ ಎಂದು ಹೇಳಲಾಗುತ್ತಿದೆ.
ಆರೋಗ್ಯಾಧಿಕಾರಿಗಳ ಕ್ರಮದ ಬಗ್ಗೆ ವ್ಯಾಪಕ ಆಕ್ರೋಷ :
ಸುರತ್ಕಲ್ ಮನಪಾ ಕಚೇರಿಯಿಂದ 50-100 ಮೀ. ಅಂತರದಲ್ಲಿರುವ ಅಕ್ರಮ ಕಟ್ಟಡಗಳು, ಹೆದ್ದಾರಿಯಲ್ಲೇ ಇರುವ ಸಿಟಿ ಲಂಚ್ ಹೋಂ ಹೋಟೆಲ್, ಅಕ್ಕಪಕ್ಕದ ಹತ್ತಾರು ಬೃಹತ್ ಕಟ್ಟಡಗಳು, ಹೆದ್ದಾರಿಯಲ್ಲೇ ನಡೆಯುವ ವಾಹನಗಳ ಪಾರ್ಕಿಂಗ್, ಸುರತ್ಕಲ್ ನಿಂದ ಕಾಟಿಪಳ್ಳ ತನಕ ಮುಖ್ಯರಸ್ತೆಯಲ್ಲಿ ಇರುವ ಅನಧಿಕೃತ ವ್ಯಾಪಾರ, ತಡಂಬೈಲ್ ಸುಪ್ರೀಂ ಮಹಲ್ ನಿಂದ ಚೇಳಾಯರು ರಸ್ತೆಯಲ್ಲಿ ಇರುವ ಅನಧಿಕೃತ ಗೂಡಂಗಡಿ ವ್ಯಾಪಾರ, ಸರ್ವಿಸ್ ರಸ್ತೆಯಲ್ಲಿ ಇರುವ ವ್ಯಾಪಾರ ಈ ಎಲ್ಲಾ ಅಕ್ರಮಗಳು ಕಣ್ಣೆದುರೇ ಕಾಣುತ್ತಿದ್ದರೂ ಇದರ ಬಗ್ಗೆ ಇದುವರೆಗೆ ಯಾವೂದೇ ಕ್ರಮ ಕೈಗೊಳ್ಳದ ಮನಪಾ ಆರೋಗ್ಯಾಧಿಕಾರಿಗಳು ಯಾರೋ ದೂರು ಕೊಟ್ಟರು, ಬೋಗಸ್ ಹೆಸರಲ್ಲಿ ಪತ್ರಿಕೆಯಲ್ಲಿ ಬರೆದರು ಎಂದು ಬಡ ಮೀನುಗಾರರ ಸ್ಟಾಲ್ ಗಳನ್ನು ನೆಲಸಮ ಮಾಡಿರುವುದು ಯಾವ ನ್ಯಾಯ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.
ಮನಪಾ ಕಚೇರಿ ಸುತ್ತಮುತ್ತ 100 ಮೀ. ದೂರದಲ್ಲಿ ಅಕ್ರಮ ಕಟ್ಟಡ, ವ್ಯಾಪಾರ ನಿರಾತಂಕವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಕ್ರಮ ಕೈಗೊಳ್ಳಲ್ಲು ಧೈರ್ಯ ಇಲ್ಲದೇ ಬಡ ವ್ಯಾಪಾರಿಗಳ ಮೇಲೆ ದೌರ್ಜನ್ಯ ನಡೆಸಿರುವ ಮನಪಾ ಆರೋಗ್ಯಾಧಿಕಾರಿಗಳ ಕ್ರಮದ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಷ ವ್ಯಕ್ತವಾಗಿದೆ.
Comments are closed.