ಕರ್ನಾಟಕ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್-ಸುರೇಶ್ ಮನೆ ಮೇಲೆ ಸಿಬಿಐ ದಾಳಿ; ದಾಖಲೆ ಪರಿಶೀಲನೆ

Pinterest LinkedIn Tumblr

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗು ಅವರ ಸಹೋದರ ಸಂಸದ ಡಿ ಕೆ ಸುರೇಶ್ ಅವರಿಗೆ ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದಾರೆ.

ಸೋಮವಾರ ಬೆಳ್ಳಂಬೆಳಗ್ಗೆ ಸಿಬಿಐ ಅಧಿಕಾರಿಗಳು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸ ಸೇರಿದಂತೆ ಅವರ ಊರು ರಾಮನಗರದ ಹಳ್ಳಿಯ ಮನೆ ಸೇರಿ 15ಕ್ಕೂ ಹೆಚ್ಚು ಕಡೆಗಳಲ್ಲಿ ಏಕಾಏಕಿ ದಾಳಿ ನಡೆಸಿದ್ದಾರೆ.

ಡಿಕೆಶಿ ಸೋದರ ಡಿಕೆ ಸುರೇಶ್ ನಿವಾಸದ ಮೇಲೂ CBI ದಾಳಿ ನಡೆಸಿದೆ. ಕನಕಪುರದ ನಿವಾಸಗಳ ಮೇಲೂ ಸಿಬಿಐ ಸರ್ಚ್ ನಡೆದಿದೆ.

ಐವರು ಸಿಬಿಐ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮುಂಜಾನೆ 6 ಗಂಟೆಗೆ ಸಿಬಿಐ ದಾಳಿ ನಡೆಸಲಾಗಿದೆ. ಡಿ.ಕೆ. ಶಿವಕುಮಾರ್ ಭ್ರಷ್ಟಾಚಾರದಿಂದ ಹಣ ಗಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿಂದೆ ಐಟಿ ಮತ್ತು ಇಡಿ ಅಧಿಕಾರಿಗಳು ಕೂಡ ಡಿ.ಕೆ. ಶಿವಕುಮಾರ್ ಮನೆ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಡಿಕೆ ಶಿವಕುಮಾರ್ ಜೈಲು ಸೇರಿದ್ದರು. ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆ ನಡೆಸುವಂತೆ ರಾಜ್ಯ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಹಿನ್ನೆಲೆಯಲ್ಲಿ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ನಡೆದಿರುವ ಸಾಧ್ಯತೆಯಿದೆ.

ಡಿ.ಕೆ. ಶಿವಕುಮಾರ್ ಮನೆ ಜೊತೆಗೆ ಸಂಸದ ಡಿ.ಕೆ. ಸುರೇಶ್ ಮನೆ ಮೇಲೂ ದಾಳಿ ನಡೆಸಲಾಗಿದೆ. ಈಗಾಗಲೇ ಐಟಿ ಮತ್ತು ಇಡಿ ಎರಡೂ ತನಿಖಾ ಸಂಸ್ಥೆಗಳಿಂದ ಡಿಕೆಶಿ ವಿಚಾರಣೆ ನಡೆಸಲಾಗಿತ್ತು. ಇದರ ಬೆನ್ನಲ್ಲೇ ಇದೀಗ ಸಿಬಿಐ ಅಧಿಕಾರಿಗಳಿಂದ ವಿಚಾರಣೆ ನಡೆಯುತ್ತಿರುವುದರಿಂದ ಕಾಂಗ್ರೆಸ್​ನ ಟ್ರಬಲ್ ಶೂಟರ್ ಎಂದೇ ಕರೆಸಿಕೊಳ್ಳುವ ಡಿಕೆ ಶಿವಕುಮಾರ್​ಗೆ ಮತ್ತೊಂದು ಸಂಕಷ್ಟ ಎದುರಾದಂತಾಗಿದೆ.

ಡಿಕೆ ಶಿವಕುಮಾರ್ ಕಾಂಗ್ರೆಸ್ ಹೈಕಮಾಂಡ್​ಗೆ ಕೋಟಿ ಕೋಟಿ ಹಣ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಸಿಬಿಐ ಅಧಿಕಾರಿಗಳು ಡಿಕೆ ಶಿವಕುಮಾರ್ ಅವರ ಮನೆಯನ್ನು ಪರಿಶೀಲನೆ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಇಬ್ಬರನ್ನೂ ವಿಚಾರಣೆ ಮಾಡುತ್ತಿದ್ದಾರೆ. ಡಿ.ಕೆ. ಸುರೇಶ್ ಕೂಡ ಡಿ.ಕೆ. ಶಿವಕುಮಾರ್ ಮನೆಯಲ್ಲೇ ಇದ್ದರು. ಹೀಗಾಗಿ, ಸಹೋದರರಿಬ್ಬರ ವಿಚಾರಣೆಯನ್ನೂ ಒಟ್ಟಿಗೇ ಮಾಡುತ್ತಿದ್ದಾರೆ. ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ. ಸುರೇಶ್ ಮನೆ ಮೇಲೆ ಸಿಬಿಐ ದಾಳಿ ನಡೆದಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಡಿ.ಕೆ. ಶಿವಕುಮಾರ್ ಬೆಂಬಲಿಗರು ಡಿಕೆಶಿ ಮನೆಯ ಬಳಿ ಸೇರಿದ್ದಾರೆ.

Comments are closed.