ಕರಾವಳಿ

‘ನಮ್ಮ ಧರ್ಮ ಸಂಸ್ಕ್ರತಿಯನ್ನು ಪಾಶ್ಚಾತ್ಯ ಸಂಸ್ಕೃತಿಯ ಆಘಾತದಿಂದ ಉಳಿಸಬಲ್ಲ ಸತ್ವವುಳ್ಳ ಕಲೆ ಹರಿಕಥೆ’: ಪಾಲೆಮಾರ್

Pinterest LinkedIn Tumblr

ಮಂಗಳೂರು : ‘ನಮ್ಮ ಧರ್ಮ ಸಂಸ್ಕ್ರತಿಯನ್ನು ಪಾಶ್ಚಾತ್ಯ ಸಂಸ್ಕೃತಿಯ ಆಘಾತದಿಂದ ಉಳಿಸಬಲ್ಲ ಸತ್ವವುಳ್ಳ ಕಲೆ ಹರಿಕಥೆ’ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಭಿಪ್ರಾಯ ಪಟ್ಟರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಹರಿಕಥಾ ಪರಿಷತ್ (ರಿ) ಮಂಗಳೂರು ಇದರ ಸಹಭಾಗಿತ್ವದಲ್ಲಿ ಹರಿಕಥಾ ಪರಿಷತ್ತಿನ ದಶಮಾನೋತ್ಸವದ ಅಂಗವಾಗಿ ಆಯೋಜಿಸಲಾದ ಹತ್ತು ದಿನಗಳ ಹರಿಕಥೆ ಪರ್ಬದ ಸಮಾರೋಪ ಸಮಾರಂಭಕ್ಕೆ ಚಾಲನೆಯಿತ್ತು ಅವರು ಮಾತನಾಡುತ್ತಿದ್ದರು.

‘ಪರಿಷತ್ತು ಮನೆ ಮನೆಯಲ್ಲಿ ಹರಿಕಥೆ ಅಭಿಯಾನ ಪ್ರಾರಂಭಿಸಿ ಯುವ ಜನತೆಯನ್ನು ಹರಿಕಥೆಯೆಡೆಗೆ ಸೆಳೆಯಬೇಕು’ ಎಂದು ತುಳು ಕೂಟದ ಅಧ್ಯಕ್ಷರಾದ ದಾಮೋದರ ನಿಸರ್ಗ ಕರೆಯಿತ್ತರು.’ಹರಿಕಥಾ ಪರಿಷತ್ತಿನ ವತಿಯಿಂದ ಹರಿಕಥಾ ಕಲಾ ಪೋಷಕ ಪುರಸ್ಕಾರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಹರಿಕಥಾ ಅಕಾಡೆಮಿಯ ಸ್ಥಾಪನೆಗೆ ಕಾಲ ಸೂಕ್ತವಾಗಿದೆ’ ಎಂದು ಸಮಾರೋಪ ಭಾಷಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅಭಿಪ್ರಾಯ ಪಟ್ಟರು. ‘ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅವಕಾಶವನ್ನು ಹರಿಕಥೆ ಕಲೆಗೆ ಕಲ್ಪಿಸುವುದಾಗಿ’ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್‌ಸಾರ್ ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ಹೇಳಿದರು.

ಪರಿಷತ್ತಿನ ವತಿಯಿಂದ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ಅವರನ್ನು ಸನ್ಮಾನಿಸಲಾಯಿತು. ಅಕಾಡೆಮಿ ವತಿಯಿಂದ ಪರಿಷತ್ತಿನ ದಶಮಾನೋತ್ಸವದ ಸಲುವಾಗಿ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿಯವರನ್ನು ಅಭಿನಂದಿಸಲಾಯಿತು.

ಪರಿಷತ್ತಿನ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ತುಳುವರ್ಲ್ಡ್ ಅಧ್ಯಕ್ಷ ರಾಜೇಶ್ ಆಳ್ವ, ತುಳು ಸಂಘಟಕ ನಾಗೇಶ್ ಕಾಸರಗೋಡು, ಪರಿಷತ್ತಿನ ಉಪಾಧ್ಯಕ್ಷ ನಾರಾಯಣ ರಾವ್, ಸದಸ್ಯ ಮಧುಸೂದನ ಆಯರ್ ಉಪಸ್ಥಿತರಿದ್ದರು.

ಹರಿಕಥೆ ಪರ್ಬದ ಸದಸ್ಯ ಸಂಚಾಲಕ ಚೇತಕ್ ಪೂಜಾರಿ ಸ್ವಾಗತಿಸಿದರು. ಹರಿಕಥಾ ಪರಿಷತ್ತಿನ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ಅಭಿನಂದನಾ ಭಾಷಣಗೈದರು.

ಪರಿಷತ್ತಿನ ಕಾಸರಗೋಡು ಜಿಲ್ಲಾ ಸಂಚಾಲಕ ಶಂನಾಡಿಗ ಕುಂಬ್ಳೆ ಸನ್ಮಾನ ಪತ್ರ ವಾಚಿಸಿದರು. ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಹರಿಕಥೆ ಪರ್ಬದ ಸಂಯೋಜಕರಾಗಿದ್ದರು. ಡಾ.ಎಸ್.ಪಿ.ಗುರುದಾಸ್ ಕಾರ್ಯಕ್ರಮ ನಿರೂಪಿಸಿದರು.

ರಾಮಚಂದ್ರ ಮಣಿಯಾಣಿ ಪ್ರಾರ್ಥಿಸಿದರು. ಬಳಿಕ ದೇವಕೀತನಯ ಕೂಡ್ಲು ಇವರಿಂದ ‘ಅಂಕೊದ ಬೂಳ್ಯೊ’ ಎಂಬ ಹರಿಕಥೆ ಜರಗಿತು. ಸುರೇಶ್ ಶೆಟ್ಟಿ ಹಾಗೂ ಶೈಲಶ್ರೀ ಕಾಮತ್ ಹಿಮ್ಮೇಳದಲ್ಲಿ ಸಹಕರಿಸಿದರು.

Comments are closed.