ಕಲಬುರ್ಗಿ: ಪ್ರಧಾನಿ ನರೇಂದ್ರ ಮೋದಿಯವರ ತಪ್ಪು ಹುಡುಕುವುದೆ ನನ್ನ ಕೆಲಸವಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ.
ಕಲಬುರ್ಗಿಗೆ ಆಗಮಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಆರ್ಥಿಕವಾಗಿ ದೇಶ ಸಂಕಷ್ಟಕ್ಕೆ ಗುರಿಯಾಗಿದೆ. ಇದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ತಲೆದೋರಿದ ಸಮಸ್ಯೆಗಳೂ ಕಾರಣವಾಗಿದೆ. ಜೊತೆಗೆ ಕೊರೋನಾ ಸೋಂಕೂ ಕಾರಣವಾಗಿದೆ. ಹೀಗಿರುವಾಗ ಪ್ರಧಾನಿ ಮೋದಿಯವರ ತಪ್ಪುಗಳನ್ನು ಹುಡುಕುತ್ತಾ ಕೂಡುವುದು ಸರಿಯಲ್ಲ. ಎಲ್ಲವನ್ನೂ ನಾನು ಗಮನಿಸುತ್ತೀದ್ದೇನೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ರಾಜಕೀಯ ವಾರ್ ನಡೆದಿದೆ. ಕೊರೋನಾ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡುತ್ತವೇ. ಇದ್ಯಾವುದರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ. ಪಕ್ಷ ಸಂಘಟನೆ ಮಾಡುವುದೇ ನನ್ನ ಕೆಲಸ ಎಂದು ಹೇಳಿದರು.
ದೇವೇಗೌಡರು ಹೋದಲ್ಲೆಲ್ಲಾ ಅಳುತ್ತಿದ್ದರು, ಈಗ ಕುಮಾರಸ್ವಾಮಿ ತಂದೆಯನ್ನು ಅನುಕರಿಸಿ ಹೋದಲ್ಲಿ, ಬಂದಲ್ಲಿ ಅಳುತ್ತಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿಕೆ ಬಗ್ಗೆ ದೇವೇಗೌಡರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಚುನಾವಣೆ ನಡೆದಿರುವುದರಿಂದ ನಾನು ಯಾರ ಹೇಳಿಕೆ ಬಗ್ಗೆಯೂ ಮಾತನಾಡುವುದಕ್ಕೆ ಹೋಗಲ್ಲ. ಅದರ ಅವಶ್ಯಕತೆಯೂ ಇಲ್ಲ. ನಮ್ಮ ಪಕ್ಷ ಯಾರು ಯಾರನ್ನು ಬೆಳೆಸಿದೆ ಎಲ್ಲರಿಗೂ ಗೊತ್ತಿದೆ.
ಯಾರ್ಯಾರು ಯಾವ ಪಕ್ಷ ಸೇರಿದರೂ ಎನ್ನುವುದು ಗೊತ್ತಿದೆ. ಚುನಾವಣಾ ಸಂದರ್ಭದಲ್ಲಿ ಏನೇನು ಮಾತಾಡುತ್ತಿದ್ದಾರೆ ಎನ್ನುವುದನ್ನೂ ಗಮನಿಸಿದ್ದೇನೆ ಎಂದರು. ನಾನು ನಿನ್ನೆ ರಾಜಕಾರಣಕ್ಕೆ ಬಂದಿಲ್ಲ. 1970 ರಿಂದಲೂ ಈ ಭಾಗದಲ್ಲಿ ಪ್ರವಾಸ ಮಾಡಿದ್ದೇನೆ. ನನಗೆ ಪಕ್ಷ ಬೆಳೆಸುವುದಷ್ಟೇ ಮುಖ್ಯ. ಜೆಡಿಎಸ್ ಪಕ್ಷ ರಾಷ್ಟ್ರೀಯ ಪಕ್ಷವಾಗಿದೆ. ಇವರೆಲ್ಲಾ ಹೊರಗೆ ಬಂದರು. ಆದರೆ, ನಾನು ಏಕಾಂಗಿಯಾಗಿ ಪಕ್ಷ ಮುನ್ನಡೆಸಿದ್ದೇನೆ. ನಾನು ಯಾರ ಹೆಗಲ ಮೇಲೂ ಕೈಯಿಟ್ಟು ಪಕ್ಷ ಮುನ್ನಡೆಸುತ್ತಿಲ್ಲ. ಇವತ್ತು ಜೆಡಿಎಸ್ ಶಕ್ತಿ ಕಡಿಮೆಯಾಗಿದ್ದರೂ, ಕಾರ್ಯಕರ್ತರು ಮಾತ್ರ ನಮ್ಮ ಜೊತೆಗಿದ್ದಾರೆ ಎಂದರು.
ನಾಲ್ಕು ವಿಧಾನ ಪರಿಷತ್ ಹಾಗೂ ಎರಡು ವಿಧಾನಸಭೆ ಉಪ ಚುನಾವಣೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಅಖಾಡಕ್ಕಿಳಿಸಲಿದೆ. ಪರಿಷತ್ ಹಾಗೂ ವಿಧಾನಸಭೆ ಎರಡರಲ್ಲೂ ಜೆಡಿಎಸ್ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಯಾರು ಎಷ್ಟೇ ಲಘುವಾಗಿ ಮಾತಾಡಿದರೂ ಚುನಾವಣೆ ನಂತರ ಉತ್ತರ ಕೊಡುತ್ತೇನೆ. ಚುನಾವಣೆಯ ಫಲಿತಾಂಶದ ಮೂಲಕ ಅವರಿಗೆ ಉತ್ತರ ನೀಡುತ್ತೇನೆ ಎಂದು ದೇವೇಗೌಡರು ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
Comments are closed.