ಮಂಗಳೂರು, ಅಕ್ಟೊಬರ್.11: ಮಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದ್ದ ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯಾನಿರ್ವಾಹಣಾಧಿಕಾರಿಯಾಗಿದ್ದ ಅನಂತಕೃಷ್ಣ(71) ಅವರು ಇಂದು (ರವಿವಾರ) ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಕಳೆದ ಕೆಲವು ದಿನಗಳಿಂಡ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
1946ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಜನಿಸಿದ ಅನಂತಕೃಷ್ಣ ಅವರು ಬಂಟ್ವಾಳ ಎಸ್.ವಿ.ಎಸ್. ಹೈಸ್ಕೂಲು ಮತ್ತು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕಲಿತು ಮೈಸೂರು ವಿವಿಯಿಂದ ಗಣಿತ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿ ಪಡೆದಿದ್ದರು.
1971ರಲ್ಲಿ ಕರ್ನಾಟಕ ಬ್ಯಾಂಕ್ನ ಅಧಿಕಾರಿಯಾಗಿ ಸೇರಿಕೊಂಡ ಇವರು ಬ್ಯಾಂಕ್ನ ಪ್ರಗತಿಗೆ ಅದ್ಭುತ ಕೊಡುಗೆ ನೀಡಿದ್ದಾರೆ. 2000ದಲ್ಲಿ ಇವರು ಬ್ಯಾಂಕ್ನ ಅಧ್ಯಕ್ಷ ಹಾಗೂ ಸಿಇಒ ಆಗಿ ನೇಮಕಗೊಂಡಿದ್ದು, 2004ರವರಗೆ ಸೇವೆ ಸಲ್ಲಿಸಿದ್ದಾರೆ. ಬಳಿಕ ಇವರು ಬ್ಯಾಂಕ್ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮುಂದುವರೆದಿದ್ದು, 2016ರಲ್ಲಿ ನಿವೃತ್ತರಾದರು.
ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ಮೊಡಂಕಾಪು ದೀಪಿಕಾ ಹೈಸ್ಕೂಲು ಮತ್ತು ಮಣಿಪಾಲದ ಎಂಐಟಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಇವರು 1971ರಲ್ಲಿ ಕರ್ನಾಟಕ ಬ್ಯಾಂಕ್ ಲಿಮಿಟೆಡ್ಗೆ ಸೇರುವ ಮುನ್ನ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್ಎಎಲ್)ನ ಜೂನಿಯರ್ ಪ್ರೋಗ್ರಾಮರ್ ಆಗಿ ಸೇರಿದ್ದರು.
ಬ್ಯಾಂಕ್ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದ ಅವರು, 1994ರಲ್ಲಿ ಜನರಲ್ ಮ್ಯಾನೇಜರ್ ಆಗಿ ಪದೋನ್ನತಿ ಹೊಂದಿದ್ದರು. 1998ರಲ್ಲಿ ಚೀಫ್ ಜನರಲ್ ಮ್ಯಾನೇಜರ್ ಆಗಿ 2000 ಇಸವಿಯಲ್ಲಿ ಸಿಇಒ ಮತ್ತು ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
ಇವರ ಸಮರ್ಥ ನಾಯಕತ್ವದಲ್ಲಿ ಕರ್ನಾಟಕ ಬ್ಯಾಂಕ್ ತ್ವರಿತ ಪ್ರಗತಿ ಸಾಧಿಸಿದ್ದು, ಉತ್ತಮ ಬೆಳವಣಿಗೆಗೆ ಸಾಕ್ಷಿಯಾಯಿತು. ಅನಂತಕೃಷ್ಣ ಅವರು ಭಾರತೀಯ ಬ್ಯಾಂಕ್ಗಳ ಸಂಘದ ಗೌರವ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಅನಂತಕೃಷ್ಣ ಅವರಿಗೆ, ವರ್ಷದ ಪಿಆರ್ ಪರ್ಸನ್-2002, ಸೊಸೈಟಿ ಆಫ್ ಇಂಡಿಯಾ(ಪಿಆರ್ಎಸ್ಐ), ಮಂಗಳೂರು-ಮಣಿಪಾಲ ಚಾಪ್ಟರ್, ಕೆಕೆ ಪೈ ರಾಷ್ಟ್ರೀಯ ಬ್ಯಾಂಕಿಂಗ್ ಪ್ರಶಸ್ತಿ, ಮಂಗಳೂರು ನಿರ್ವಹಣಾ ಸಂಘದಿಂದ ಅತ್ಯುತ್ತಮ ವ್ಯವಸ್ಥಾಪಕ-2004, ಅಕಾಡೆಮಿ ಆಫ್ ಜನರಲ್ ಎಜುಕೇಶನ್, ರೋಟರಿ ಕ್ಲಬ್ ಉಡುಪಿ-ಮಣಿಪಾಲ ಹಾಗೂ ಸಿಂಡಿಕೇಟ್ ಬ್ಯಾಂಕ್ ಜಂಟಿಯಾಗಿ ನೀಡಿದ ಹೊಸ ವರ್ಷದ ಪ್ರಶಸ್ತಿ-2008, ರೋಟರಿ 4ವೇ ಟೆಸ್ಟ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
Comments are closed.