ಬೆಂಗಳೂರು: ಭಾರತೀಯ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರು ಭಾನುವಾರ (ಅ.11) ರಾತ್ರಿ ನಿಧನರಾದರು. ಅವರಿಗೆ 87 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ, ಅವರು ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಪುತ್ರ ಮತ್ತು ಪುತ್ರಿಯನ್ನು ಅವರು ಅಗಲಿದ್ದಾರೆ.
ಮೂಲತಃ ಮೈಸೂರಿನವರಾದ ರಾಜನ್, ತಮ್ಮ ಸಹೋದರ ನಾಗೇಂದ್ರಪ್ಪ ಅವರೊಂದಿಗೆ ಸೇರಿಕೊಂಡು ‘ರಾಜನ್-ನಾಗೇಂದ್ರ’ ಹೆಸರಿನಲ್ಲಿ ಜಂಟಿಯಾಗಿ ಸಂಗೀತ ನಿರ್ದೇಶನ ಮಾಡುತ್ತಿದ್ದರು. 1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. 1952ರಿಂದ 1999ರವರೆಗೆ 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇದರಲ್ಲಿ ಕನ್ನಡದ 200ಕ್ಕೂ ಅಧಿಕ ಸಿನಿಮಾಗಳಿವೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದಾರೆ. ರಾಜನ್ ಅವರ ಸಹೋದರ ನಾಗೇಂದ್ರ ಅವರು 2000ರಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದರು.
ಮಂತ್ರಾಲಯ ಮಹಾತ್ಮೆ, ಗಂಧದ ಗುಡಿ, ನಾ ನಿನ್ನ ಬಿಡಲಾರೆ, ಎರಡು ಕನಸು, ಕಳ್ಳ ಕುಳ್ಳ, ಬಯಲು ದಾರಿ, ನಾ ನಿನ್ನ ಮರೆಯಲಾರೆ, ಆಟೋ ರಾಜ, ಗಾಳಿಮಾತು, ಚಲಿಸುವ ಮೋಡಗಳು, ಬೆಟ್ಟದ ಹೂವು, ಸುಪ್ರಭಾತ, ಮತ್ತೆ ಹಾಡಿತು ಕೋಗಿಲೆ, ಕರುಳಿನ ಕುಡಿ, ಪರಸಂಗದ ಗೆಂಡೆತಿಮ್ಮ, ಶ್ರೀನಿವಾಸ ಕಲ್ಯಾಣ ಸೇರಿದಂತೆ ಹಲವು ಹಿಟ್ ಚಿತ್ರಗಳಿಗೆ ಸಂಗೀತ ನೀಡಿದ್ದಾರೆ. ಡಾ. ರಾಜ್ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳು ಈ ಪಟ್ಟಿಯಲ್ಲಿ ಬಹಳಷ್ಟಿದೆ.
ರಾಜನ್ ನಿಧನಕ್ಕೆ ಚಿತ್ರರಂಗದ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
Comments are closed.