ಮಂಗಳೂರು ಅಕ್ಟೋಬರ್ 12:ಮಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಡಾ. ಪಿ.ಎಸ್.ಹರ್ಷ ಅವರು ಭಾನುವಾರ ಭೇಟಿ ನೀಡಿ ಕಚೇರಿಯ ಕಟ್ಟಡ ಸೇರಿದಂತೆ ಕಡತಗಳ ಪರಿಶೀಲನೆ ನಡೆಸಿದರು.
ರಾಜ್ಯದಲ್ಲಿ ಮಂಗಳೂರು ಜಿಲ್ಲೆಯು ಸೂಕ್ಷ್ಮ ಜಿಲ್ಲೆಯಲ್ಲಿ ಒಂದಾಗಿದ್ದು ಜಿಲ್ಲಾ ಮಟ್ಟದ ಕಚೇರಿಗಳ ಜೊತೆಯಲ್ಲಿ ಹೆಚ್ಚು ಅಧೀನ ಕಚೇರಿಗಳು ಸೇರಿದಂತೆ ಕೇಂದ್ರ ಸರ್ಕಾರದ ಕಚೇರಿಗಳು, ನಿಗಮ ಹಾಗೂ ಸರ್ಕಾರಿ ಸ್ವಾಮ್ಯದ ಅನೇಕ ಕಾರ್ಪೋರೇಷನ್ ಕಚೇರಿಗಳಿದ್ದು ಇವುಗಳ ಕಾರ್ಯವೈಖರಿ ಸರ್ಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ತಲುಪಿಸುವ ಕೆಲಸ ಚಾಚು ತಪ್ಪದೇ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಗಬೇಕೆಂದರು.
ಪ್ರಚಾರ ಕಾರ್ಯಗಳನ್ನು ಈಗ ನಿರ್ವಹಿಸುತ್ತಿರುವ ಶೈಲಿಯ ಜೊತೆ ಡಿಜಿಟಲ್ ಆಧುನಿಕ ತಂತ್ರಜ್ಞಾನದ ಮೂಲಕ ಜನರಿಗೆ ತಲುಪಿಸಬೇಕು ಎಂದರು.
ಕಚೇರಿಯ ಕೆಲಸ ಕಾರ್ಯಗಳು ಮತ್ತು ಕಾರ್ಯವೈಖರಿಗಳ ಬಗ್ಗೆ ಪರಿಶೀಲಿಸಿ ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆ ಇರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಸಿಬ್ಬಂದಿಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಕಚೇರಿಯ ಎಲ್ಲಾ ಸಿಬ್ಬಂದಿಗಳು ಸೇರಿದಂತೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡ ಸಿಬ್ಬಂದಿಗಳು ಕಚೇರಿಯ ದೈನಂದಿನ ಕಾರ್ಯಗಳನ್ನು ಅಂದೇ ತಪ್ಪದೇ ನಿರ್ವಹಿಸಬೇಕು ಎಂದರು.
ಪತ್ರಕರ್ತರ ಆರೋಗ್ಯ ಕರ್ನಾಟಕ ಆಯುಷ್ಮಾನ್ ಕಾರ್ಡ್ಗಳನ್ನು ಶೀಘ್ರವಾಗಿ ವಿತರಿಸಬೇಕು ಎಂದು ಸೂಚನೆ ನೀಡಿದ ಅವರು ಗಾಂಧೀ ಭವನವನ್ನು 3 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಈಗಾಗಲೇ ಮೊದಲ ಹಂತದ ಅನುದಾನ ಬಿಡುಗಡೆ ಮಾಡಲಾಗಿದೆ. ಇದರ ನಿರ್ಮಾಣಕ್ಕೆ ನಗರದಲ್ಲಿ ಜಾಗ ಗುರುತಿಸಿ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ವಾರ್ತಾಧಿಕಾರಿ ಬಿ. ಮಂಜುನಾಥ್, ವಾರ್ತಾ ಸಹಾಯಕ ಶಿವಕುಮಾರ್ ಹಾಗೂ ಕಚೇರಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Comments are closed.