ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಹತ್ಯೆ ಪ್ರಕರಣದ ಆರೋಪಿ ಜ್ಯೋತಿಷಿ ನಿರಂಜನ್ ಭಟ್ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಜ್ಯೋತಿಷಿ ನಿರಂಜನ್ ಭಟ್ ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿಯೊಂದಿಗೆ ಭಾಸ್ಕರ್ ಶೆಟ್ಟಿ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದು, ಆತ ಆಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಎಂದು ಆರೋಪಿಸಲಾಗಿದೆ. 2016 ಜುಲೈ 28ರಂದು ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ನಡೆದಿತ್ತು. ಭಾಸ್ಕರ್ ಶೆಟ್ಟಿ ತಲೆಗೆ ಬಲವಾಗಿ ರಾಡ್ನಿಂದ ಹೊಡೆದು, ಶವವನ್ನು ಹೋಮಕುಂಡದಲ್ಲಿ ಸುಟ್ಟು ಹಾಕಲಾಗಿತ್ತು.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಮತ್ತು ನ್ಯಾಯಮೂರ್ತಿಗಳಾದ ಎಸ್ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣ್ಯಂ ಅವರನ್ನೊಳಗೊಂಡ ಪೀಠವು ಅರ್ಜಿಯ ಕುರಿತು ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅರ್ಜಿದಾರರಾದ ನಿರಂಜನ್ ಭಟ್ ಜುಲೈ 27 ರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದರು. 2019 ರ ಮೇ 10 ರಂದು ಹೈಕೋರ್ಟ್ಗೆ ಜಾಮೀನು ಕೋರಿ ಭಟ್ ಅರ್ಜಿ ಸಲ್ಲಿಸಿದ್ದು, ಕೆಲವು ಸಾಕ್ಷ್ಯಾಧಾರಗಳು ಇನ್ನೂ ವಿಚಾರಣೆಗೆ ಒಳಪಡಿಸಲಾಗಿಲ್ಲ. ಇದರ ವಿಚಾರಣೆಗೆ ಆರು ತಿಂಗಳು ಬೇಕಾಗುತ್ತದೆ ಎಂದು ಹೈಕೋರ್ಟ್ ತಿಳಿಸಿತ್ತು.
ಕೆಲವು ಸಾಕ್ಷಿದಾರರನ್ನು ಆರೋಪಿಗಳ ಎದುರಲ್ಲೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ಹೇಳಿದೆ. ಭಾಸ್ಕರ್ ಶೆಟ್ಟಿ ಪತ್ನಿಗೆ ಜಾಮೀನು ನೀಡಲಾಗಿದೆ.
ಭಾಸ್ಕರ್ ಶೆಟ್ಟಿ ಅವರನ್ನು ಇಂದ್ರಾಳಿಯಲ್ಲಿರುವ ಅವರ ಮನೆಯಲ್ಲಿ ಹತ್ಯೆ ಮಾಡಲಾಗಿತ್ತು. ನಂತರ ಅವರ ಶವವನ್ನು ಹೋಮಕುಂಡದಲ್ಲಿ ಸುಟ್ಟುಹಾಕಲಾಯಿತು. ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಮಗ ನವನೀತ್ ಶೆಟ್ಟಿ ಮತ್ತು ಜ್ಯೋತಿಷಿ ನಿರಂಜನ್ ಭಟ್ ಪ್ರಮುಖ ಆರೋಪಿಗಳಾಗಿದ್ದಾರೆ. ಸಾಕ್ಷಿ ನಾಶಪಡಿಸಿದ ಕಾರಣ ಬಂಧಿಸಲ್ಪಟ್ಟ ನಿರಂಜನ್ ಭಟ್ ಅವರ ತಂದೆ ಶ್ರೀನಿವಾಸ್ ಭಟ್ ಹಾಗೂ ಚಾಲಕ ರಾಘವೇಂದ್ರ ಜಾಮೀನಿನ ಮೇಲೆ ಹೊರಬಂದಿದ್ದಾರೆ.
Comments are closed.