ಕರಾವಳಿ

ಇನ್ನು ಮುಂದೆ ಅಮೆಜಾನ್ ಪ್ರೈಂನಲ್ಲಿ ಕೂಡ “ಕದ್ದು ಮುಚ್ಚಿ” ನೋಡ ಬಹುದಂತೆ

Pinterest LinkedIn Tumblr

ಬೆಂಗಳೂರು : ವಸಂತರಾಜ್ ಅವರ ನಿರ್ದೇಶನದ ‘ಕದ್ದು ಮುಚ್ಚಿ’ ಹೊಸ ತಿರುವು ಪಡೆದುಕೊಂಡಿದೆ. ಈಗಾಗಲೇ 2019 ಫೆಬ್ರವರಿಯಲ್ಲಿ ಬಿಡುಗಡೆಗೊಂಡು ಸಾಧಾರಣ ಯಶಸ್ಸು ಕಂಡಿರುವ ಈ ಚಿತ್ರಕ್ಕೆ ಈಗ ಜಾಕ್ ಪಾಟ್ ಹೊಡೆದಿದೆ.

ಲಾಕ್ ಡೌನ್ ನಿಂದ ಸಿನಿಮಾ ಮಂದಿರಗಳು ಮುಚ್ಚಲ್ಪಟ್ಟ ಬಳಿಕ ಚಿತ್ರ ನಿರ್ಮಾಪಕರು ತಮ್ಮ ಹೊಸ ಚಿತ್ರಗಳನ್ನು ಬಿಡುಗಡೆ ಮಾಡುವ ಬಗ್ಗೆ ಚಿಂತಿತರಾಗಿದ್ದರು. ಕೆಲ ನಿರ್ಮಾಪಕರಂತೂ ತಮ್ಮ ಚಿತ್ರಗಳನ್ನು ಥಿಯೇಟರ್​​ ಪುನಾರರಂಭವಾಗುವವರೆಗೆ ಕಾದು ಥಿಯೇಟರ್​​ನಲ್ಲಿ ಬಿಡುಗಡೆ ಮಾಡುವುದೋ ಅಥವಾ ಈಗಾಗಲೇ ಒಟಿಟಿ ಪ್ಲಾಟ್​​​ಫಾರ್ಮ್​ನಲ್ಲಿ ರಿಲೀಸ್ ಮಾಡುವುದೋ ಎಂಬ ಗೊಂದಲಕ್ಕೆ ಒಳಗಾಗಿದ್ದಾರೆ.

ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಈಗಾಗಲೇ ಬಿಡುಗಡೆಗೊಂಡು ಸಾಧಾರಣ ಯಶಸ್ಸು ಕಂಡಿರುವ ‘ಕದ್ದು ಮುಚ್ಚಿ’ ಸಿನಿಮಾ ಒಳ್ಳೆ ಮೊತ್ತಕ್ಕೆ ಮಾರಾಟವಾಗಿದೆ. ಅಮೆಜಾನ್ ಸಂಸ್ಥೆಯು ಚಿತ್ರವನ್ನು ವೀಕ್ಷಿಸಿ ದೊಡ್ಡ ಮೊತ್ತಕ್ಕೆ ಚಿತ್ರದ ಹಕ್ಕನ್ನು ಖರೀದಿ ಮಾಡಿದೆ ಎಂದು ನಿರ್ಮಾಪಕ ವಿ.ಜಿ. ಮಂಜುನಾಥ್ ತಿಳಿಸಿದ್ದಾರೆ. ಈ ಮೂಲಕ ಕತೆ ಬರೆದು ಚಿತ್ರ ನಿರ್ಮಾಣ ಮಾಡಿರುವ ತನ್ನ ಮೊದಲ ಪ್ರಯತ್ನ ಸಫಲತೆ ನೀಡಿದೆ ಎಂದು ಹರ್ಷದಿಂದ ಹೇಳಿಕೊಂಡಿದ್ದಾರೆ ನಿರ್ಮಾಪಕ ವಿ.ಜಿ. ಮಂಜುನಾಥ್.

ವಸಂತರಾಜ್ ಅವರ ನಿರ್ದೇಶನದ ಈ ಚಿತ್ರ ಮಲೆನಾಡಿನಲ್ಲಿ ನಡೆಯುವ ಕಥಾನಕವನ್ನು ಹೊಂದಿದೆ. ಊಟಿ, ಶಿವಮೊಗ್ಗ, ತೀರ್ಥ್ಠಳ್ಳಿ, ಮಡಿಕೇರಿ ಸೋಮವಾರ ಪೇಟೆ ಸುತ್ತಮುತ್ತಲ ಸುಂದರ ಲೊಕೇಶನ್‍ಗಳಲ್ಲಿ ಚಿತ್ರೀಕರಣ ನಡಸಲಾಗಿದೆ. ಎಸ್.ಪಿ.ಬಾಲಸುಬ್ರಮಣ್ಯಂ ಅವರು ಈ ಚಿತ್ರದಲ್ಲಿ ಮದುವೆ ಸಂಭ್ರಮದ ಹಾಡೊಂದನ್ನು ಹಾಡಿದ್ದಾರೆ. ಇನ್ನು ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಹಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ, ಬಸವರಾಜ್ ಅರಸ್ ಸಂಕಲನ, ಕಲೈ ನೃತ್ಯ, ಸಾಹಸ ಥ್ರಿಲ್ಲರ್ ಮಂಜು ಅವರದ್ದು.

ನವಿರಾದ ಲವ್ ಸ್ಟೋರಿಯ ಜೊತೆಗೆ ಕಾಮಿಡಿಯನ್ನು ಪ್ಯಾರೆಲಲ್ ಆಗಿ ತೆಗೆದುಕೊಂಡು ಚಿತ್ರವನ್ನು ನಿರ್ಮಿಸಲಾಗಿದೆ. ಇದರ ಜೊತೆ ಫ್ಯಾಮಿಲಿ ಸೆಂಟಿಮೆಂಟ್ ಕಥೆ ಕೂಡ ಇದೆ, ಫ್ಯಾಮಿಲಿ ವ್ಯಾಲ್ಯೂಗಳಿಗೆ ಹೆಚ್ಚಿನ ಮಹತ್ವ ನೀಡಿ ಚಿತ್ರಕಥೆಯನ್ನು ರಚಿಸಲಾಗಿದೆ. ಪ್ರೀತಿಯಿಂದ ವಂಚಿತನಾದ ಆಗರ್ಭ ಶ್ರೀಮಂತನ ಮಗ ಸಮಾಜದಲ್ಲಿ ಏನೆಲ್ಲಾ ಪರಿಸ್ಥಿತಿ ಅನುಭವಿಸುತ್ತಾನೆ ಎಂದು ಚಿತ್ರದಲ್ಲಿ ಹೇಳಲಾಗಿದೆ.

ಕಿರುತೆರೆ ಮೂಲಕ ಅಪಾರ ಅಭಿಮಾನಿ ವರ್ಗವನ್ನು ಪಡೆದ ನಟ. ಅಗ್ನಿ ಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಎಂದೇ ಖ್ಯಾತರಾದ ವಿಜಯ್ ಸೂರ್ಯ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈಗಾಗಲೇ ಕೃಷ್ಣ ರುಕ್ಮಿಣಿ, ಮಾರ್ಚ್- 22, ಸೇರಿದಂತೆ ಹಲವಾರು ಕನ್ನಡ, ತೆಲುಗು ಚಿತ್ರಗಳಲ್ಲಿ ನಟಿಸಿರುವ ಮೇಘಶ್ರೀ ಅವರು ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಜೊತೆಗೆ ಹಿರಿಯನಟ ದೊಡ್ಡಣ್ಣ, ಬಿ.ವಿ. ರಾಧಾ, ಸುಚೇಂದ್ರ ಪ್ರಸಾದ್, ಹೊನ್ನವಳ್ಳಿ ಕೃಷ್ಣ, ಚಿಕ್ಕಣ್ಣ, ರಾಜೇಶ್ ನಟರಂಗ, ಎಂ. ಎಸ್. ಉಮೇಶ್‍ರಂಥ ಸಾಕಷ್ಟು ಹಿರಿಯ ಕಲಾವಿದರ ದೊಡ್ಡ ಬಳಗವೇ ಈ ಚಿತ್ರದಲ್ಲಿ ನಟಿಸಿದ್ದಾರೆ. ಕಾರ್ಯಕಾರಿ ನಿರ್ಮಾಪಕ ಎಂ.ಎಸ್​​. ಕುಮಾರಸ್ವಾಮಿ ಈ ಚಿತ್ರದಲ್ಲಿ ಖಳ ನಟನಾಗಿ ಅಭಿನಯಿಸಿದ್ದಾರೆ. ಇನ್ನು ಮುಂದೆ ‘ಕದ್ದು ಮುಚ್ಚಿ’ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ.

Comments are closed.