Condolences

ಸರ್ಕಾರದ ಉಚಿತ ಚಿಕಿತ್ಸೆಯು ಫಲ ನೀಡಲಿಲ್ಲ-ಇಹಲೋಕ ತ್ಯಜಿಸಿದ ಶಿಕ್ಷಕಿ ಪದ್ಮಾಕ್ಷಿ – ಮುಗಿಲು ಮುಟ್ಟಿದ ಆಕ್ರಂದನ

Pinterest LinkedIn Tumblr

ಮಂಗಳೂರು/ ಮೂಡುಬಿದಿರೆ, ಆಕ್ಟೋಬರ್.16 : ಮಕ್ಕಳ ಮನವಿಗೆ ಸ್ಪಂದಿಸಿ ಸರ್ಕಾರ ಉಚಿತವಾಗಿ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸಿದರೂ ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡುಬಿದಿರೆ ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಇಹಲೋಕ ತ್ಯಜಿಸಿದ್ದಾರೆ.

ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಶಿಕ್ಷಕಿಗೆ ಸೆ. 29ರಂದು ಕೋವಿಡ್-19 ದೃಢಪಟ್ಟು ಮಂಗಳೂರಿನ ಖಾಸಗಿ ಆಸ್ಪತ್ರೆ ಯಲ್ಲಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶಿಕ್ಷಕಿಗೆ ಎರಡನೇ ಹಂತದ ಪರೀಕ್ಷೆಯಲ್ಲಿ ಕೋವಿಡ್ ನೆಗೆಟಿವ್ ಬಂದಿತ್ತು. ತಾಯಿಯ ಚಿಕಿತ್ಸೆಗೆ ಸಹಕರಿಸುವಂತೆ ಕೋರಿ ಪುತ್ರಿ ಐಶ್ವರ್ಯಾ ಫೇಸ್ ಬುಕ್ ನಲ್ಲಿ ಮಾಡಿಕೊಂಡ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದರು.

ಆದರೆ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಡಬಿದ್ರೆಯ ಶಿಕ್ಷಕಿ ಪದ್ಮಾಕ್ಷಿ ಅವರು ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕೋವಿಡ್ ನೆಗೆಟಿವ್ ಎಂದು ಕಂಡುಬಂದಿದ್ದರೂ ಪದ್ಮಾಕ್ಷಿ ಅವರ ಆರೋಗ್ಯಸ್ಥಿತಿ ಅಪರಾಹ್ಣ ವಿಷಮಿಸತೊಡಗಿದ ಕಾರಣ ಪತಿ ಶಶಿಕಾಂತ್ , ಪುತ್ರಿ ಐಶ್ವರ್ಯ ಅವರು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ ಎಕ್ಮೋ ಚಿಕಿತ್ಸೆಗಾಗಿ ಏರ್ ಲಿಫ್ಟ್ ಮೂಲಕ ಬೆಂಗಳೂರು ಗೆ ಒಯ್ಯಲು ಸಿದ್ಧತೆ ನಡೆಸಿದ್ದರು.

ಪದ್ಮಾಕ್ಷಿ ಅವರು ಮೂಡಬಿದರೆಯ ಮಕ್ಕಿ ಜವಹಾರ್ ನೆಹರೂ ಹೈಸ್ಕೂಲ್​ನ ಶಿಕ್ಷಕಿ. ವಿದ್ಯಾಗಮ ತೆರಳುತ್ತಿದ್ದ ಇವರಿಗೆ ಕರೊನಾ ಸೋಂಕು ತಗುಲಿತ್ತು. ಬಳಿಕ ಅವರನ್ನು ಮಂಗಳೂರಿನ ಇಂಡಿಯಾನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಹಿಂದೆಯೇ ಫೇಸ್​ಬುಕ್​ನಲ್ಲಿ ಅಳಲು ತೋಡಿಕೊಂಡಿದ್ದ ಶಿಕ್ಷಕ ದಂಪತಿ ಮಗಳು ಐಶ್ವರ್ಯಾ ಜೈನ್​, ಸದ್ಯ ಅಮ್ಮನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಆರ್ಥಿಕ ನೆರವು ನೀಡಿ, ಆ ಮೂಲಕ ನನ್ನ ತಾಯಿಯನ್ನು ಉಳಿಸಿಕೊಡಿ ಎಂದು ಫೇಸ್​ಬುಕ್​ನಲ್ಲಿ ಫೋಟೋ ಸಹಿತ ಮನವಿ ಮಾಡಿದ್ದರು.

ಅಷ್ಟೇ ಅಲ್ಲ, ವಿದ್ಯಾಗಮದ ಪರಿಣಾಮ ಅಮ್ಮನಿಗೆ ಈ ಸ್ಥಿತಿ ಬಂದಿದೆ ಎಂದೂ ಅಸಮಾಧಾನ ಹೊರಹಾಕಿದ್ದರು. ವಿದ್ಯಾಗಮಕ್ಕೂ ಮೊದಲು ಅಮ್ಮ ಆರಾಮಾಗಿದ್ದರು. ವಿದ್ಯಾಗಮದ ನಂತರವೇ ಅವರಿಗೆ ಈ ಸ್ಥಿತಿ ಬಂದಿದೆ ಎಂದು ಪೋಸ್ಟ್ ಮಾಡಿದ್ದರು.

ಈ ಕುರಿತು ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಎಚ್ಚೆತ್ತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿ ಶಿಕ್ಷಕಿಗೆ ಉತ್ತಮ ಚಿಕಿತ್ಸೆ ನೀಡಲು ಅಗತ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದ್ದರು.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪಅವರ ಸೂಚನೆಯಂತೆ ಗುಣಮಟ್ಟದ ಚಿಕಿತ್ಸೆಗೆ ವ್ಯವಸ್ಥೆ ಮತ್ತು ಆ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದರು.

ಸರ್ಕಾರದ ಸೂಚನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಐಶ್ವರ್ಯಾಳನ್ನು ಸಂಪರ್ಕಿಸಿ, ತಾಯಿಯ ಚಿಕಿತ್ಸೆ ಕುರಿತು ಸರ್ಕಾರ ಪೂರ್ಣ ಕಾಳಜಿ ವಹಿಸಿದೆ. ಯಾವುದೇ ಆತಂಕ ಬೇಡ ಎಂದು ಸಾಂತ್ವಾನ ಹೇಳಿದ್ದರು.

ಆದರೆ, ಆರೋಗ್ಯ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಏನೇ ಪ್ರಯತ್ನ ಮಾಡಿದರೂ ಶಿಕ್ಷಕಿಯನ್ನು ಉಳಿಸಿಕೊಳ್ಳಲು ಕೊನೆಗೂ ಸಾಧ್ಯವಾಗಲಿಲ್ಲ. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಪದ್ಮಾಕ್ಷಿಯನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ. ದುರಾದೃಷ್ಟಕರ ಪದ್ಮಾಕ್ಷಿ ಪತಿ, ಮೂಡಬಿದರೆಯ ಡಿ.ಜೆ. ಹೈಯರ್ ಪ್ರೈಮರಿ ‌ಶಾಲೆ ಮುಖ್ಯಶಿಕ್ಷಕ ಶಶಿಕಾಂತ್ ಅವರಿಗೂ ಕರೊನಾ ದೃಢಪಟ್ಟಿದೆ.

ಇತ್ತ ಪದ್ಮಕ್ಷಿ ಅವರ ಪತಿಗೂ (ಐಶ್ವರ್ಯಾ ತಂದೆ )ಕರೊನಾ ಇರುವುದರಿಂದ ಮಗಳು ಐಶ್ವರ್ಯಾ ಮನದಲ್ಲಿ ಕಾರ್ಮೋಡ ಕವಿದಿದೆ. ಈಗಾಗಲೇ ಅಮ್ಮನನ್ನು ಕಳೆದುಕೊಂಡಿರುವ ಐಶ್ವರ್ಯಾಗೆ ಅಪ್ಪನೇ ಪ್ರಮುಖ ಆಧಾರ ಸ್ತಂಭವಾಗಿದ್ದಾರೆ. ಇದೀಗ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

Comments are closed.