ಅಂತರಾಷ್ಟ್ರೀಯ

ಸ್ಪುಟ್ನಿಕ್ ವಿ ಚುಚ್ಚುಮದ್ದು ಕೊರೋನಾಕ್ಕೆ 92%ರಷ್ಟು ಪರಿಣಾಮಕಾರಿ: ರಷ್ಯಾ

Pinterest LinkedIn Tumblr


ಮಾಸ್ಕೋ: ತಾನು ಅಭಿವೃದ್ಧಿಪಡಿಸಿದ ಲಸಿಕೆ ಸ್ಪುಟ್ನಿಕ್ ವಿ ಚುಚ್ಚುಮದ್ದು ಕೊರೋನಾಕ್ಕೆ 92%ರಷ್ಟು ಪರಿಣಾಮಕಾರಿ ಎಂದು ರಷ್ಯಾ ಬುಧವಾರ ಹೇಳಿದೆ.

ಸ್ಪುಟ್ನಿಕ್ ವಿ ಲಸಿಕೆ ಪರಿಣಾಮಕಾರಿತ್ವವು ಶೇಕಡಾ 92 ರಷ್ಟಿದೆ (ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳು ಮತ್ತು ಪ್ಲಾಸ್ಮಾ ಚಿಕಿತ್ಸೆ ಪಡೆದವರ ನಡುವೆ ನಡೆಸಲಾದ 20 ದೃಢೀಕರಿಸಿದ ಕೋವಿಡ್ ಪ್ರಕರಣಗಳ ಆಧಾರದ ಮೇಲೆ ಲೆಕ್ಕಾಚಾರ)”ಎಂದು ರಷ್ಯಾ ಡೈರೆಕ್ಟ್ ಇವೆಸ್ಟ್ ಮೆಂಟ್ ಫಂಡ್ (ಆರ್‌ಡಿಐಎಫ್) ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ ಸ್ಪುಟ್ನಿಕ್ ವಿ ಲಸಿಕೆಗಾಗಿನ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳನ್ನು ಅನುಮೋದಿಸಲಾಗಿದೆ ಮತ್ತು ಬೆಲಾರಸ್, ಯುಎಇ, ವೆನೆಜುವೆಲಾ ಮತ್ತು ಇತರ ದೇಶಗಳಲ್ಲಿ ಇದು ನಡೆಯುತ್ತಿದೆ.. ಭಾರತದಲ್ಲಿ, ಲಸಿಕೆಯ ಎರಡು, ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ಪ್ರಸ್ತುತ, 40,000 ಸ್ವಯಂಸೇವಕರು ಸ್ಪುಟ್ನಿಕ್ ವಿ ವಿವಿಧ ಹಂತದ ಪ್ರಯೋಗದಲ್ಲಿ ನಿರತವಾಗಿದ್ದು 20 ಸಾವಿರ ಮಂದಿಯನ್ನು ಮೊದಲ ಡೋಸ್​ಗೆ ಹಾಗೂ 16 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮೊದಲ ಮತ್ತು ಎರಡನೇ ಡೋಸ್​ ಪ್ರಯೋಗಗಳಿಗೆ ಒಳಪಡಿಸಲಾಗಿದೆ.

“ಲಸಿಕೆಯ ಬಳಕೆ ಮತ್ತು ಕ್ಲಿನಿಕಲ್ ಪ್ರಯೋಗಗಳ ಫಲಿತಾಂಶಗಳು ಕೊರೋನಾ ಸೋಂಕು ಹರಡುವಿಕೆಯನ್ನು ತಡೆಯಲು ಪರಿಣಾಮಕಾರಿ ಪರಿಹಾರವಾಗಿದೆ ಎಂಬುದನ್ನು ತೋರಿಸುತ್ತದೆ ಮತ್ತು ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸುವ ಅತ್ಯಂತ ಯಶಸ್ವಿ ಮಾರ್ಗವಾಗಿದೆ . ” ಎಂದು ರಷ್ಯಾದ ಆರೋಗ್ಯ ಸಚಿವ ಮಿಖಾಯಿಲ್ ಮುರಾಶ್ಕೊ ಹೇಳಿದ್ದಾರೆ.

ಮೊದಲ ಲಸಿಕೆ ನೀಡಿದ 21 ದಿನಗಳ ನಂತರ ಮಧ್ಯಂತರ ವರದಿ ಬಂದಿದೆ. ಇದರ ವಿಶ್ಲೇಷಣೆ ಆಧಾರದ ಮೇಲೆ ಲಸಿಕೆಯ ಪರಿಣಾಮಕಾರಿತ್ವವನ್ನು ಪ್ರದರ್ಶಿಸಲಾಯಿತು. ಪ್ರಯೋಗಗಳ ಸಮಯದಲ್ಲಿ ಯಾವುದೇ ಅನಿರೀಕ್ಷಿತ ಪ್ರತಿಕೂಲ ಘಟನೆಗಳು ನಡೆದಿಲ್ಲ ಎಂದು ರಷ್ಯಾ ಹೇಳಿಕೆ ತಿಳಿಸಿದೆ.

ಆಗಸ್ಟ್ 11 ರಂದು ವಿಶ್ವದ ಮೊದಲ ಕೋವಿಡ್ -19 ಲಸಿಕೆಯನ್ನು ನೋಂದಾಯಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ರಷ್ಯಾ ಪಾತ್ರವಾಯಿತು. ರಷ್ಯಾದ ಆರೋಗ್ಯ ಸಚಿವಾಲಯ ವ್ಯಾಪ್ತಿಯ ಗಮಾಲಿಯಾ ನ್ಯಾಷನಲ್ ರಿಸರ್ಚ್​ ಸೆಂಟರ್​ ಫಾರ್ ಎಪಿಡೆಮಿಯೋಲಜಿ ಆ್ಯಂಡ್ ಮೈಕ್ರೋ ಬಯಾಲಜಿ ಸಂಸ್ಥೆ ಈ ಸ್ಪುಟ್ನಿಕ್ ವಿಲಸಿಕೆ ತಯಾರಿಸಿದೆ.

Comments are closed.