ಮುಂಬೈ: ಗಾಯಕ ಸೋನು ನಿಗಮ್. ಅವರಿಗೆ ಭಾರತದಲ್ಲಿ ಖ್ಯಾತಿ, ಹಣ ಎಲ್ಲವೂ ಸಿಕ್ಕಿದೆ. ಆದರೆ ತಮ್ಮ ಮಗ ಮಾತ್ರ ಈ ದೇಶದಲ್ಲಿ ಗಾಯಕನಾಗುವುದು ಬೇಡ ಎಂದು ಅವರು ನಿರ್ಧರಿಸಿದ್ದಾರೆ!
‘ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವನು ಗಾಯಕ ಆಗುವುದು ನನಗೆ ಇಷ್ಟವಿಲ್ಲ. ಅದರಲ್ಲೂ ಈ ದೇಶದಲ್ಲಿ ಬೇಡವೇ ಬೇಡ. ಹೇಗಿದ್ದರೂ ಆತ ಭಾರತದಲ್ಲಿ ವಾಸಿಸುವುದೇ ಇಲ್ಲ. ಅವನು ದುಬೈನಲ್ಲಿ ಇದ್ದಾನೆ. ನಾನು ಅವರನ್ನು ಈಗಾಗಲೇ ಭಾರತದಿಂದ ಹೊರಗೆ ಕರೆದುಕೊಂಡು ಹೋಗಿದ್ದೇನೆ’ ಎಂದು ಹೇಳಿದ್ದಾರೆ ಸೋನು ನಿಗಮ್. ‘ಟೈಮ್ಸ್ ನೌ ಡಿಜಿಟಲ್’ಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ಹೇಳಿಕೊಂಡಿದ್ದಾರೆ.
‘ನನ್ನ ಮಗ ಕೂಡ ಸಿಂಗರ್. ಆದರೆ ಅವನಿಗೆ ಜೀವನದಲ್ಲಿ ಬೇರೆ ಆಸಕ್ತಿಗಳೂ ಇವೆ. ಸದ್ಯಕ್ಕೆ ದುಬೈನಲ್ಲಿನ ಟಾಪ್ ಗೇಮರ್‌ಗಳಲ್ಲಿ ಅವನೂ ಒಬ್ಬನಾಗಿದ್ದಾನೆ. ಅಲ್ಲಿ ಫೋರ್ಟ್‌ನೈಟ್ ಎಂಬ ಗೇಮ್ ಇದೆ. ಅದರಲ್ಲಿ ನನ್ನ ಮಗ ಟಾಪ್ ಗೇಮರ್ ಆಗಿದ್ದಾನೆ. ಅನೇಕ ಪ್ರತಿಭೆಗಳಿರುವ ಬುದ್ಧಿವಂತ ಹುಡುಗ ಅವನು. ಅವನು ಏನಾಗಬೇಕು ಎಂದು ನಾನು ಅವನಿಗೆ ಹೇಳಲು ಇಷ್ಟಪಡುವುದಿಲ್ಲ. ಅವನೇ ಏನಾಗಲು ಇಷ್ಟಪಡುತ್ತಾನೆ ನೋಡೋಣ’ ಎಂದಿದ್ದಾರೆ ಸೋನು ನಿಗಮ್.
ನೆಪೋಟಿಸಂ ವಿಚಾರವಾಗಿ ಬಾಲಿವುಡ್ ಮಂದಿಯ ವಿರುದ್ಧ ಈ ಹಿಂದೆಯೇ ಸೋನು ನಿಗಮ್ ಗುಡುಗಿದ್ದರು. ದೊಡ್ಡ ದೊಡ್ಡ ಮ್ಯೂಸಿಕ್ ಕಂಪನಿಗಳ ಬಗ್ಗೆ ಬಹಿರಂಗವಾಗಿ ಆರೋಪ ಮಾಡಿದ್ದರು. ಅಲ್ಲದೆ, ಅನೇಕ ವಿಚಾರಗಳನ್ನು ನೇರವಾಗಿ ಹೇಳುವ ಮೂಲಕ ಕೆಲವರ ವಿರೋಧ ಕಟ್ಟಿಕೊಂಡಿದ್ದಾರೆ. ಈಗ ಅವರು ತಮ್ಮ ಮಗ ಭಾರತದಲ್ಲಿ ಗಾಯಕ ಆಗುವುದು ಬೇಡ ಎಂದು ಹೇಳಿರುವುದಕ್ಕೂ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Comments are closed.