ಬೆಳಗಾವ; ಸರ್ಕಾರಿ ಆಸ್ಪತ್ರೆಗಳಲ್ಲಿ ಜನವರಿಯಿಂದಲೇ ಎಲ್ಲ ಪರೀಕ್ಷೆಗಳನ್ನು ಉಚಿತ ಮಾಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಹೊಸ ಆಕ್ಸಿಜನ್ ಘಟಕ, 200 ಹಾಸಿಗೆಗಳ ನೇತ್ರ, ಇಎನ್ ಟಿ ವಾರ್ಡ್, 90 ಹಾಸಿಗೆಗಳ ಮಕ್ಕಳ ವಾರ್ಡ್ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಎರಡನ್ನೂ ಒಂದೇ ಇಲಾಖೆಯಾಗಿಸುವ ಚಿಂತನೆ ಇದೆ. ಈ ಎರಡೂ ಇಲಾಖೆಗಳು ಒಂದೇ ನಿರ್ವಹಣೆಯಲ್ಲಿರಬೇಕು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಎರಡೂ ಇಲಾಖೆಗಳ ಹೊಣೆಯನ್ನು ನನಗೆ ನೀಡಿದ್ದಾರೆ. ಇದರಿಂದ ಆರೋಗ್ಯ ಕ್ಷೇತ್ರದ ನಿರ್ವಹಣೆ ಸುಲಭವಾಗಲಿದೆ. ಮುಂದಿನ ದಿನಗಳಲ್ಲಿ ಎರಡನ್ನೂ ಒಂದೇ ಇಲಾಖೆಯಾಗಿಸುವ ಚಿಂತನೆ ಇದೆ. ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಎಲ್ಲ ಬಗೆಯ ಪರೀಕ್ಷೆಗಳನ್ನು ಜನವರಿಯಿಂದಲೇ ಉಚಿತ ಮಾಡಲಾಗುವುದು ಎಂದರು.
ಸರ್ಕಾರಿ ಆಸ್ಪತ್ರೆಗಳಲ್ಲಿ ಶೌಚಾಲಯ, ವಾರ್ಡ್ ಸ್ವಚ್ಛವಿಲ್ಲ ಎಂಬ ಆಪಾದನೆ ಇದೆ. ಬೆಳಗಾವಿ ಆಸ್ಪತ್ರೆಯಲ್ಲಿ ಸ್ವಚ್ಛತೆಗೆ ತಿಂಗಳಿಗೆ 36 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಸ್ವಚ್ಛವಿಲ್ಲ ಎಂದರೆ ನೋವಾಗುತ್ತದೆ. ಖಾಸಗಿಗಿಂತ ಸರ್ಕಾರಿ ಆಸ್ಪತ್ರೆಗೆ ಹೆಚ್ಚು ಖರ್ಚು ಮಾಡಲಾಗುತ್ತದೆ. ಖಾಸಗಿ ಆಸ್ಪತ್ರೆಗೆ ಸಿಗುವ ಸೌಲಭ್ಯ ಹಾಗೂ ಅವರು ಮಾಡುವ ಸೇವೆ ಸರ್ಕಾರಿ ಆರೋಗ್ಯ ಕ್ಷೇತ್ರದಲ್ಲೂ ದೊರೆಯಬೇಕು. ಎಲ್ಲರೂ ಈ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
Comments are closed.