ಕುಂದಾಪುರ: ಕಾಂಗ್ರೆಸ್ ಪಕ್ಷ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಚಟುವಟಿಕೆ ಇರುವುದು ಗ್ರಾಮೀಣ ಪ್ರದೇಶದಲ್ಲಿ ಮಾತ್ರ. ಹೀಗಾಗಿ ಕಾಂಗ್ರೆಸ್ ಮುಕ್ತ ಭಾರತ ಪರಿಕಲ್ಪನೆ ಸಾಕಾರವಾಗಬೇಕಾದರೆ ಗ್ರಾಮ ಮಟ್ಟದಲ್ಲಿ ಕಾಂಗ್ರೆಸ್‌ನ್ನು ಕಿತ್ತೊಗೆಯಬೇಕು. ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಬೇಕು. ಇದಕ್ಕಾಗಿ ಎಲ್ಲರೂ ಒಂದೇ ಮನೆ ಒಂದೇ ಕುಟುಂಬ ಎನ್ನುವ ಕಲ್ಪನೆಯೊಂದಿಗೆ ಒಗ್ಗಟ್ಟಿನಿಂದ ದುಡಿದು ಭಾರತೀಯ ಜನತಾ ಪಕ್ಷವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಭಾರತೀಯ ಜನತಾ ಪಕ್ಷ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ ಹೇಳಿದರು.
ತ್ರಾಸಿ ಮಂಜು ದೇವಾಡಿಗರ ಮನೆ ವಠಾರದಲ್ಲಿ ಭಾರತೀಯ ಜನತಾ ಪಕ್ಷದ ಬೈಂದೂರು ವಿಧಾನಸಭಾ ಕ್ಷೇತ್ರದ ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತರ ಕುಟುಂಬ ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಾಲಚಂದ್ರ ಭಟ್, ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ಮಂಡಲ ಉಪಾಧ್ಯಕ್ಷ ವಿನೋದ ಭಂಡಾರಿ, ತಾಪಂ ಸದಸ್ಯ ನಾರಾಯಣ ಕೆ. ಗುಜ್ಜಾಡಿ ಮಾತನಾಡಿದರು. ತ್ರಾಸಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿರಿಯ ಬಿಜೆಪಿ ಕಾರ್ಯಕರ್ತರಾದ ಚಂದ್ರಶೇಖರ ಶೆಟ್ಟಿ, ಮಹಾಬಲ ದೇವಾಡಿಗ, ಅಂತೋನಿ ಲೂವಿಸ್, ಪ್ರಭಾಕರ ಮೊವಾಡಿ, ಪಾಂಡುರಂಗ ದೇವಾಡಿಗ ಮತ್ತು ಫೆಲಿಕ್ಸ್ ಫಿಲಿಪ್ ಅವರನ್ನು ಗೌರವಿಸಲಾಯಿತು. ಬಿಜೆಪಿ ಬೈಂದೂರು ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾಗೀರಥಿ ಸುರೇಶ್, ತ್ರಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಮಿಥುನ್ ಎಂ.ಡಿ.ಬಿಜೂರು, ಬಿಜೆಪಿ ಮುಖಂಡ ಶೇಖರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಬೈಂದೂರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ ದೇವಾಡಿಗ ಸ್ವಾಗತಿಸಿದರು. ತ್ರಾಸಿ ಗ್ರಾಪಂ ಮಾಜಿ ಸದಸ್ಯ ರವೀಂದ್ರ ಖಾರ್ವಿ ಕಾರ್ಯಕ್ರಮ ನಿರ್ವಹಿಸಿದರು. ತ್ರಾಸಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರವಿ ಶೆಟ್ಟಿಗಾರ್ ವಂದಿಸಿದರು.
Comments are closed.