ಜಕಾರ್ತಾ: ಇಂಡೋನೇಷ್ಯಾದ ರಾಜಧಾನಿ ಜಕಾರ್ತಾದಿಂದ ಹೊರಟಿದ್ದ ವಿಮಾನವೊಂದು ನಾಪತ್ತೆಯಾಗಿತ್ತು ಎಂದು ವರದಿಯಾದ ಬೆನ್ನಲ್ಲೇ ವಿಮಾನವು ಪತನಗೊಂಡ ಕುರಿತು ಮಾಹಿತಿಗಳು ಲಭಿಸಿವೆ. ಸೈನ್ಯವು ವಿಮಾನದ ಸಿಗ್ನಲ್ ಗಳನ್ನು ಪತ್ತೆ ಹಚ್ಚಿದ್ದು, ದೇಹದ ಅಂಗಗಳು, ವಸ್ತ್ರಗಳು ಮತ್ತು ವಿಮಾನದ ಅವಶೇಷಗಳನ್ನು ನೀರಿನ ಆಳದಿಂದ ಮುಳುಗುತಜ್ಞರು ಪತ್ತೆ ಹಚ್ಚಿದ್ದಾರೆ ಎಂದು ವರದಿ ತಿಳಿಸಿದೆ.
ಶ್ರೀವಿಜಯ ಏರ್ ಲೈನ್ಸ್ ನ ವಿಮಾನವು ಸೋಕಾರ್ನೋ-ಹಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ನಾಲ್ಕು ನಿಮಿಷಗಳ ಬಳಿಕ ಸಮುದ್ರದಲ್ಲಿ ಪತನಗೊಂಡಿದೆ ಎಂದು ವರದಿ ತಿಳಿಸಿದೆ. ಸೇನಾ ನೌಕೆಯೊಂದು ವಿಮಾನದ ಸಿಗ್ನಲ್ ಅನ್ನು ಪತ್ತೆ ಹಚ್ಚಿದ್ದು, ಜಲಮಟ್ಟದಿಂದ 23 ಮೀಟರ್ (75 ಫೀಟ್) ತಳದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಇಂಡೋನೇಶ್ಯಾ ಸೇನಾ ಮುಖ್ಯಸ್ಥ ಹಾದಿ ಜಜಾಂಟೋ ತಿಳಿಸಿದ್ದಾರೆ.
ಈ ಘಟನೆಯ ಕುರಿತಾದಂತೆ ಇಂಡೋನೇಶ್ಯಾದ ಅಧ್ಯಕ್ಷ ಜೋಕೋ ವಿಡೋಡೊ, “ಎಲ್ಲರೂ ಪ್ರಾರ್ಥಿಸಿ, ಯಾರಾದರೂ ಬದುಕಿ ಬರಬಹುದು” ಎಂದು ತಮ್ಮ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. ಈವರೆಗೆ ಒಟ್ಟು ಐದು ದೇಹಗಳ ಹಾಗೂ ವಿಮಾನ ಅವಶೇಷಗಳು ಪತ್ತೆಯಾಗಿವೆ. ಜೊತೆಗೆ ಮಗುವಿನ ಪಿಂಕ್ ಕಲರ್ ವಸ್ತ್ರ, ಚಕ್ರದ ತುಂಡು, ಲೈಫ್ ಜಾಕೆಟ್ ಗಳು ಹಾಗೂ ಭಗ್ನಾವಶೇಷಗಳು ಪತ್ತೆಯಾಗಿವೆ ಎಂದು ಅಧಿಕೃತರು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.
Comments are closed.