ಗುಜರಾತ್: ಗುಜರಾತ್ನ ಜುನಾಗಢ ಐಷಾರಾಮಿ ಹೋಟೆಲ್ಗೆ ಏಕಾಏಕಿ ಸಿಂಹವೊಂದು ಎಂಟ್ರಿ ಕೊಟ್ಟಿರುವ ಘಟನೆ ನಡೆದಿದೆ.
ಹೋಟೆಲ್ ಲಾಬಿ ಒಳಗೆ ಸಿಂಹ ಬಂದು ಮತ್ತೆ ಅಲ್ಲಿಂದ ತೆರಳಿರುವ ದೃಶ್ಯಗಳು ಹೋಟೆಲ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
Lions in the city of Junagadh is a regular affair nowadays. @ParveenKaswan @susantananda3 @CentralIfs pic.twitter.com/o2PtLiXmui
— Udayan Kachchhi (@Udayan_UK) February 10, 2021
ಉದಯನ್ ಕಚ್ಚಿ ಎಂಬುವವರು ಟ್ವಿಟ್ಟರ್ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಜುನಾಗಢದ ಜನನಿಬಿಡ ಪ್ರದೇಶದಲ್ಲಿರುವ ಹೋಟೆಲ್ ಸರೋವರ್ ಪೋರ್ಟಿಕೊ ಹೋಟೆಲ್ಗೆ ಸಿಂಹ ಎಂಟ್ರಿ ಕೊಟ್ಟಿದೆ. ‘ಇತ್ತೀಚಿನ ದಿನಗಳಲ್ಲಿ ಜುನಾಗಢಕ್ಕೆ ಸಿಂಹಗಳು ಭೇಟಿ ನೀಡುವುದು ಸಾಮಾನ್ಯವಾಗಿದೆ’ ಎಂದು ಉದಯನ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಪಾರ್ಕಿಂಗ್ ಸ್ಥಳದ ಸುತ್ತಲೂ ನಡೆದು ಹೋಟೆಲ್ನ ಆವರಣದ ತುಂಬೆಲ್ಲಾ ಸಿಂಹ ಅಡ್ಡಾಡಿದೆ. ಸ್ವಲ್ಪ ಸಮಯದ ನಂತರ ಗೋಡೆಯ ಮೇಲೆ ಹಾರಿ ಹೋಟೆಲ್ ಹೊರಗೆ ಹೋಗಿದೆ. ಈ ಮಧ್ಯೆ ಸಿಂಹವು ಹೊರಗೆ ಹಾರಿಹೋಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಮುಖ್ಯ ದ್ವಾರದಲ್ಲಿರುವ ತನ್ನ ಕ್ಯಾಬಿನ್‌ನಲ್ಲಿ ಭಯಭೀತರಾಗಿ ಕುಳಿತುಕೊಂಡಿದ್ದರು. ಬಳಿಕ ಅದು ಮುಖ್ಯ ರಸ್ತೆಯ ಹಾದಿಯಲ್ಲಿ ನಡೆಯುತ್ತಿರುವುದನ್ನು ಖಚಿತಪಡಿಸಿಕೊಂಡರು.
ಮುಂಜಾನೆಯ ಸಮಯದಲ್ಲಿ ಸಿಂಹ ಹೋಟೆಲ್ಗೆ ಎಂಟ್ರಿ ಕೊಟ್ಟಿದ್ದು, ಈ ಸಮಯದಲ್ಲಿ ಯಾರೂ ಹೊರಾಂಗಣದಲ್ಲಿ ಓಡಾಟ ನಡೆಸದ ಕಾರಣ ಯಾವುದೇ ಸಮಸ್ಯೆ ಎದುರಾಗಿಲ್ಲ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಸಂತಾ ನಂದಾ ಕೂಡ ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಸಖತ್ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.
ಜುನಾಗಢ ನಗರ ಗಿರ್ನಾರ್ ಬೆಟ್ಟಗಳ ಬುಡದಲ್ಲಿದ್ದು, ಇಲ್ಲಿ ಗಿರ್ ಸಿಂಹ ಅಭಯಾರಣ್ಯವಿದೆ. ಇದು ವಿಶ್ವದ ಏಷ್ಯಾಟಿಕ್ ಸಿಂಹಗಳ ಕೊನೆಯ ವಾಸಸ್ಥಾನ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ಅನೇಕ ನೆಟ್ಟಿಗರು ಕಾಮೆಂಟ್ ಮಾಡಿ, ‘ಮನುಷ್ಯರು ದಿನೇ ದಿನೇ ಕಾಡನ್ನು ಆಕ್ರಮಿಸಿಕೊಂಡು ಅದನ್ನು ಕಾಂಕ್ರೀಟ್ ಕಾಡಾಗಿ ಮಾರ್ಪಾಡು ಮಾಡುತ್ತಿದ್ದಾರೆ. ಹೀಗಾಗಿ ಕಾಡುಪ್ರಾಣಿಗಳು ತಮ್ಮ ವಾಸಸ್ಥಾನ ಹುಡುಕಿಕೊಂಡು ಹೀಗೆ ಬರುತ್ತವೆ. ಅವು ನಮ್ಮ ಜಾಗಕ್ಕೆ ಬರುತ್ತಿಲ್ಲ, ನಾವೇ ಅವುಗಳ ಜಾಗವನ್ನು ಆಕ್ರಮಿಸಿಕೊಂಡಿದ್ದೇವೆ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಮತ್ತು ಮಾನವ ಸಂಘರ್ಷ ಹೆಚ್ಚಾಗುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Comments are closed.