ಭೋಪಾಲ್: ಪತ್ನಿಯ ಶೀಲವನ್ನು ಶಂಕಿಸಿ ವ್ಯಕ್ತಿಯೋರ್ವ ಆಕೆಯ ಕೈ, ಕಾಲುಗಳನ್ನು ಕತ್ತರಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಾ.09 ರಂದು ರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಪ್ರೀತಮ್ ರಜ್ಪೂತ್ (28) ವಿಶ್ವಕರ್ಮ ನಗರದಲ್ಲಿರುವ ತನ್ನ ಮನೆಗೆ ವಾಪಸ್ಸಾದಾಗ ಪತ್ನಿ ಸಂಗೀತ (26) ಮೇಲೆ ಹಲ್ಲೆ ನಡೆಸಿದ್ದಾನೆ. ಘಟನೆ ನಡೆಯುವ ವೇಳೆ ಪತ್ನಿ ಸಂಗೀತ ಮಗುವಿನೊಟ್ಟಿಗೆ ನಿದ್ರಿಸುತ್ತಿದ್ದರು ಎಂದು ಪೊಲೀಸ್ ಸಿಎಸ್ ಪಿ ಅನಿಲ್ ತ್ರಿಪಾಟಿ ಹೇಳಿದ್ದಾರೆ. ಎಡಗೈ ಹಾಗೂ ಎಡಗಾಲನ್ನು ಆರೋಪಿ ಕತ್ತರಿಸಿದ್ದು, ನೋವಿನಿಂದ ಮಹಿಳೆಯ ಚೀರಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಆರೋಪಿಯನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದಿದ್ದು, ಗಾಯಾಳು ಯುವತಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸಂತ್ರಸ್ತ ಯುವತಿ ಇಂದೋರ್ ನ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು, 15 ದಿನಕ್ಕೊಮ್ಮೆ ತವರು ಮನೆಗೆ ಹೋಗಿಬರುತ್ತಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ವ್ಯಕ್ತಿ ಈ ರೀತಿ ಮಾಡಿದ್ದೇನೆಂದು ಹೇಳಿದ್ದಾನೆ. ಆರೋಪಿ ಪ್ರೀತಮ್ ರಜ್ಪೂತ್ ಗೆ ತನ್ನ ಪತ್ನಿಯ ಬಗ್ಗೆ ಅನುಮಾನವಿತ್ತು ಎಂಬ ಮಾಹಿತಿ ಈಗ ಬಹಿರಂಗವಾಗಿದ್ದು, ಐಪಿಸಿ ಸೆಕ್ಷನ್ 307 (ಹತ್ಯೆ ಯತ್ನ) ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
Comments are closed.