ಕರಾವಳಿ

ಪಿಯುಸಿ ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವು ಪ್ರಕರಣ ಇನ್ನೂ ನಿಗೂಢ : ಸ್ನೇಹಿತ ಸೇರಿದಂತೆ ಹಲವರ ತೀವ್ರ ವಿಚಾರಣೆ

Pinterest LinkedIn Tumblr

ಮಂಗಳೂರು / ಉಳ್ಳಾಲ, ಮಾರ್ಚ್.12: ಉಳ್ಳಾಲ ಠಾಣಾ ವ್ಯಾಪ್ತಿಯ ಕುಂಪಲ ಆಶ್ರಯ ಕಾಲನಿ ನಿವಾಸಿ, ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವಿನ ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಕೆಯ ಗೆಳೆಯ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದಿರುವ ಉಳ್ಳಾಲ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ಪ್ರಕರಣದ ಹಿಂದೆ ಗಾಂಜಾ ವ್ಯಸನಿಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆಶ್ರಯಕಾಲನಿ ಭಾಗದ ಐದು ಮಂದಿಯನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಪ್ರಕರಣದ ಹಿಂದೆ ಗಾಂಜಾ ಕೈವಾಡ ಇರುವ ಶಂಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಕುಂಪಲ ಆಸುಪಾಸಿನಲ್ಲಿ ಗಾಂಜಾ ವ್ಯಸನಿಗಳ ಮೇಲೆ ಕಣ್ಗಾವಲು ಇರಿಸಿದ್ದಾರೆ. ಅಲ್ಲದೆ ಕುಂಪಲ ಆಶ್ರಯಕಾಲನಿ ಸಮೀಪ ಖಾಲಿ ಮನೆಯೊಂದನ್ನು ಗಾಂಜಾ ವ್ಯಸನಕ್ಕೆ ಅಡ್ಡೆಯಾಗಿರಿಸಿರುವ ಜಾಗದ ಮೇಲೂ ನಿಗಾ ಇರಿಸಿದ್ದಾರೆ. ಸ್ಥಳೀಯವಾಗಿ ಗಾಂಜಾ ಸೇವನೆ ನಡೆಸುತ್ತಿದ್ದ ಐವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.

ಉಳ್ಳಾಲ ಸಮೀಪದ ಕುಂಪಲ ಆಶ್ರಯಕಾಲನಿ ನಿವಾಸಿ ಚಿತ್ತಪ್ರಸಾದ್ ಎಂಬವರ ಪುತ್ರಿ ಪ್ರೇಕ್ಷಾ(17) ಮಾರ್ಚ್ 10ರಂದು ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದು, ಫೋಟೋ ಶೂಟ್‌ಗಾಗಿ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಪ್ರೇಕ್ಷಾ ಶವ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ನಗರದ ನಂತೂರು ಬಳಿಯ ನಿಟ್ಟೆ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ ಬೆಂಗಳೂರಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದರು ಎನ್ನಲಾಗಿತ್ತು.

ಮಾರ್ಚ್ 10ರಂದು ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಮನೆಗೆ ಮೂವರು ಬಂದು ಹೋಗಿದ್ದರು ಎನ್ನಲಾಗಿದೆ .ಮಧ್ಯಾಹ್ನ ವೇಳೆ ಊಟಕ್ಕೆಂದು ಮನೆಗೆ ಬಂದ ಸಂದರ್ಭ ಕೋಣೆಯೊಳಗೆ ಪ್ರೇಕ್ಷಾಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಪ್ರೇಕ್ಷಾ ನಿಗೂಢ ಸಾವಿನ ಕುರಿತು ಸಂಶಯವನ್ನು ವ್ಯಕ್ತಪಡಿಸಿರುವ ಪೋಷಕರು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗಳ ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಅನ್ನುವ ಆಗ್ರಹವನ್ನು ಮಾಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸ್ ವಶದಲ್ಲಿರುವ ಆಕೆಯ ಸ್ನೇಹಿತ ಮುಂಡೋಳಿಯ ಯತೀನ್ ರಾಜ್ , ಆಶ್ರಯಕಾಲನಿ ನಿವಾಸಿ ಸೌರವ್ ಮತ್ತು ಸುಹಾನ್ ವಿಚಾರಣೆ ಮುಂದುವರಿದಿದೆ.

ಇದೇ ವೇಳೆ `ಯತಿರಾಜ್ ಹಾಗೂ ಪ್ರೇಕ್ಷಾ ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂಬ ಮಾಹಿತಿ ಹೊರಬಿದ್ದಿದೆ. ಮಾತ್ರವಲ್ಲದೇ ಇವರು ಜತೆಗಿರುವ ಹಾಗೂ ಹುಟ್ಟುಹಬ್ಬವನ್ನು ಜೊತೆಯಾಗಿ ಆಚರಿಸಿರುವ ವೀಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಯತೀನ್ ರಾಜ್ ಜತೆಗಿನ ಸ್ನೇಹ ಮತ್ತು ಪ್ರೇಕ್ಷಾ ಫೋಟೋ ಶೂಟ್ ವಿಚಾರಕ್ಕೆ ಸಂಬಂಧಿಸಿ ಮನೆಮಂದಿ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಕುರಿತು ಪ್ರೇಕ್ಷಾಳನ್ನು ಪೋಷಕರು ತರಾಟೆಗೆ ತೆಗೆದುಕೊಂಡಿದ್ದರು. ಮಾ.7 ರಂದು ಮನೆ ಸಮೀಪ ನಡೆದಿದ್ದ ಜಾತ್ರೆಯಲ್ಲಿ ಯತೀನ್ ರಾಜ್ ಮತ್ತು ಪ್ರೇಕ್ಷಾ ಜತೆಗೆ ಇದ್ದರು. ಅಲ್ಲದೆ ಪ್ರೇಕ್ಷಾ ಬೆಂಗಳೂರಿಗೆ ತೆರಳುವ ವಿಚಾರವಾಗಿ ಜಾತ್ರೆಯಲ್ಲಿ ಇಬ್ಬರಿಗೂ ಜಗಳವಾಗಿತ್ತು ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಆದರೆ ಸಾವಿಗೂ ಮುನ್ನ ಪ್ರೇಕ್ಷಾ ಯತೀನ್ ರಾಜ್ ಗೆ ಕೊನೆ ಘಳಿಗೆಯಲ್ಲಿ ಗುಡ್ ಬೈ ಸಂದೇಶ ಹಾಕಿರುವುದು ಮೊಬೈಲ್ ಪರಿಶೀಲಿಸಿದಾಗ ಪತ್ತೆಯಾಗಿದೆ. ಅಲ್ಲದೆ 5 ನಿಮಿಷಗಳ ವೀಡಿಯೋ ಕಾಲ್ ಮಾಡಿರುವುದಾಗಿಯೂ ತಿಳಿದುಬಂದಿದೆ.

ಪ್ರೇಕ್ಷಾ ಯುತಿರಾಜ್‍ಗೆ ಕರೆಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಕಾಲ್ ಕಟ್ ಮಾಡಿರುತ್ತಾಳೆ ಎಂಬ ಮಾಹಿತಿಯು ಹರಿದಾಡುತ್ತಿದೆ. ಈ ಸಂದರ್ಭ ಯತಿರಾಜ್ ಎಷ್ಟು ಕಾಲ್ ಮಾಡಿದರೂ ಆಕೆ ಉತ್ತರಿಸದೆ ಇರುವುದನ್ನು ಕಂಡು ಆಕೆಯ ಮನೆಯ ಹತ್ತಿರ ಹೋಗಿ ಹತ್ತಿರದ ಮನೆಯ ಇಬ್ಬರು ಮಕ್ಕಳನ್ನು ನೋಡಲು ಕಳಿಸಿದ್ದ ಎಂದು ಹೇಳಲಾಗಿದೆ.

ಆದರೆ ಬಾಗಿಲು ತೆಗೆಯದ ಕಾರಣ ಮಕ್ಕಳು ಅವರ ತಾಯಿಯನ್ನು ಕರೆದುಕೊಂಡು ಬಂದು ನೋಡಲು ಹೇಳಿದ್ದಾರೆ. ಆ ಹೆಂಗಸು ಕೂಡ ಬಂದು ಬಾಗಿಲು ಬಡಿದಿದ್ದಾರೆ. ಆ ಬಳಿಕ ಪ್ರೇಕ್ಷಾಳ ತಾಯಿಯೇ ಬಂದು ನೋಡುವಾಗ ಪ್ರೇಕ್ಷಾಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.

ಮನೆಯ ಹಿಂಬಾಗಿಲ ಚಿಲಕ ಮುರಿದಿರುವುದು, ಪ್ರೇಕ್ಷಾಳಿಗೆ ಸೇರಿದ ಮೊಬೈಲ್ ಅಲ್ಲೆ ಪಕ್ಕದಲ್ಲಿ ಪತ್ತೆಯಾಗಿರುವುದು ಈ ಎಲ್ಲಾ ವಿಚಾರಗಳು ಅನುಮಾನ ಉಂಟು ಮಾಡಿದೆ.. ಆದರೆ ಆಸ್ಪತ್ರೆ ಪ್ರಾಥಮಿಕ ಹಂತದ ವರದಿಯಲ್ಲಿ ಪ್ರೇಕ್ಷಾಳದ್ದು ಆತ್ಮಹತ್ಯೆ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಶವಮಹಜರು ವರದಿ ಬಳಿಕವಷ್ಟೇ ಗೊತ್ತಾಗಲಿದೆ.

Comments are closed.