ಕುಂದಾಪುರ: ಕೋಟ ಶಿವರಾಮ ಕಾರಂತರ ಮೂಕಜ್ಜಿಯ ಕನಸು ಇಂದು ಕೋಟ ಶ್ರೀನಿವಾಸ ಪೂಜಾರಿಯವರಿಂದ ನನಸಾಗಿದೆ. ಸ್ವತಂತ್ರ ಧ್ವಜದ ಬಣ್ಣಗಳ ಕೆಳಗೆ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ವಿವಿಧತೆಯಲ್ಲಿ ಏತಕೆಯ ಸಂದೇಶವನ್ನು ಸಾರಿದ್ದು ಜ್ಙಾನಕ್ಕೆ, ಸಂಸ್ಕಾರಕ್ಕೆ, ಹುಮ್ಮಸ್ಸಿಗೆ ವಯಸ್ಸಿಲ್ಲ ಎಂದು ಡಾ. ಶಿವರಾಮ್ ಕಾರಂತರು ಹೇಳಿದ್ದರು. ಯಾವುದೇ ಜಾತಿ, ಮತ, ಭೇದ ನೋಡದೆ ಹೊಳಪು ಹೆಸರಿನ ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಕಾರಂತರಿಗೆ ನಿಜವಾದ ಗುರುದಕ್ಷಿಣೆ ತಲುಪಿದೆ ಎಂದು ಗೌರಿಗದ್ದೆಯ ಅವದೂತ ವಿನಯ್ ಗುರೂಜಿ ಹೇಳಿದರು.
ಅವರು ಶನಿವಾರ ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.)ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವ ಅಂಗವಾಗಿ, ಕೋಟ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ನಡೆದ ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಹೊಳಪು 2021 – ಕ್ರೀಡೋತ್ಸವ ಉದ್ಘಾಟಿಸಿ ಮಾತನಾಡಿದರು.
ಖಾದರ್, ಕಟೀಲ್, ಕೋಟ ಬಗ್ಗೆ ಗುರೂಜಿ ಶ್ಲಾಘನೆ..
ಕೋಟ ಶ್ರೀನಿವಾಸ ಪೂಜಾರಿಯವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಆಸ್ತಿ. ಇಂತಹ ದೂರದೃಷ್ಠಿ ಚಿಂತನೆನೆಯುಳ್ಳ ಸಚಿವರು ಕರ್ನಾಟಕಕ್ಕೆ ಮಾದರಿ. ನಳೀನ್ ಕುಮಾರ್ ಕಟೀಲ್ ಹಾಗೂ ಶ್ರೀನಿವಾಸ ಪೂಜಾರಿಯವರಲ್ಲಿ ಯಾವುದೇ ಅಹಂಕಾರವಿಲ್ಲ. ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಈ ಈರ್ವರು ನಾಯಕರು ಯಾವುದೇ ಹಮ್ಮುಬಿಮ್ಮು ಇಲ್ಲದೇ ಜನರ ಮಧ್ಯೆ ಸೇರುತ್ತಾರೆ. ದ.ಕ ಜಿಲ್ಲೆಯಲ್ಲಿ ಗಾಂಧಿ ತತ್ವ ಬದುಕಿದೆ ಎಂದರೆ ಅದಕ್ಕೆ ಯು.ಟಿ ಖಾದರ್ ಅಂತಹ ನಾಯಕರ ಕೊಡುಗೆ ಅಪಾರ ಎಂದರು. ಸಾರ್ವಜನಿಕ ಜೀವನಗಳ ಜಂಜಾಟದ ನಡುವೆ ಹೊಳಪು ಹೆಸರಿನ ವಿಶೇಷ ಕಾರ್ಯಕ್ರಮ ಸಂಘಟಿಸಿರುವುದು ಶ್ಲಾಘನೀಯ ಕೆಲಸ. ಜನಪ್ರತಿನಿಧಿಗಳು ಯಾವಾಗಲೂ ದೈಹಿಕ ಹಾಗೂ ಮಾನಸಿಕವಾಗಿ ಹುಮ್ಮಸ್ಸಿನಲ್ಲಿರಬೇಕು. ನಾವೆಲ್ಲರೂ ಜಾತಿ, ಮತ, ಭೇದ ಮರೆತು ನಿಜವಾದ ವಂದೇ ಮಾತರಂ ಶಬ್ದಕ್ಕೆ ಅರ್ಥ ಕೋಡೋಣ ಎಂದು ವಿನಯ್ ಗುರೂಜಿ ಹೇಳಿದರು.
ದ.ಕನ್ನಡ ಜಿಲ್ಲೆ ಸಂಸದ ನಳಿನ್ ಕುಮಾರ್ ಕಟೀಲು ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ಉಡುಪಿ ಶಾಸಕ ರಘುಪತಿ ಭಟ್ ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿದರು. ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಪ್ರತಿಜ್ಞಾವಿಧಿ ಭೋದಿಸಿದರು. ಶಾಸಕ ಯು.ಟಿ ಖಾದರ್ ಕ್ರೀಡಾಜ್ಯೋತಿ ಸ್ವೀಕರಿಸಿದರು. ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ಗೌಡ ಬಲೂನು ಹಾರಿ ಬಿಡುವುದರ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಿದರು. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪಥ ಸಂಚಲನಕ್ಕೆ ಚಾಲನೆ ನೀಡಿದರು. ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯತ್ ಅದ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ, ರಾಷ್ಟ್ರೀಯ ಮಹಿಳಾ ಅಯೋಗದ ಸದಸ್ಯೆ ಶ್ಯಾಮಲ ಎಸ್ ಕುಂದರ್, ಆಹಾರ ಮತ್ತು ನಾಗರೀಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅತೀಕ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಉಪ ಕಾರ್ಯದರ್ಶಿ ಕಿರಣ್ ಪೆಡ್ನೇಕರ್ ಮತ್ತಿತರರು ಉಪಸ್ಥಿತರಿದ್ದರು.
ಆನಂದ್ ಸಿ. ಕುಂದರ್ ಸ್ವಾಗತಿಸಿದರು. ನರೇಂದ್ರ ಕುಮಾರ್ ಕೋಟ ನಿರೂಪಿಸಿದರು.
ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ನಗರ ಸ್ಥಳೀಯಾಡಳಿತ ಪ್ರತಿನಿಧಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು, ಪಥ ಸಂಚಲನದಲ್ಲಿ ವಿವಿಧ ಸ್ಥಬ್ದಚಿತ್ರಗಳ ಪ್ರದರ್ಶನ, ಯಕ್ಷಗಾನದ ವೇಷಗಳು, ತಟ್ಟಿರಾಯ ವೇಷಗಳು, ಕೊರಗರ ಡೋಲು ವಾದನ, ಕಂಬಳ ಕೋಣಗಳು, ಕಹಳೆ ವಾದನ, ಕೋವಿಡ್ ಕುರಿತು ಜಾಗೃತಿ ಮೂಡಿಸುವ ಸ್ಥಬ್ದಚಿತ್ರ, ಕೋವಿಡ್ ಲಸಿಕೆ ಕುರಿತ ಸ್ಥಬ್ದಚಿತ್ರಗಳು, ಸಾಂಪ್ರದಾಯಿಕ ಧರಿಸು ತೊಟ್ಟ ಜನಪ್ರತಿನಿಧಿಗಳ ತಂಡಗಳು ಪಥ ಸಂಚಲನದ ಮೆರುಗನ್ನು ಹೆಚ್ಚಿಸಿದ್ದವು. ಉಡುಪಿ ಮತ್ತು ದ.ಕನ್ನಡ ಜಿಲ್ಲೆಗಳ ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಗಣನೀಯ ಸಾಧನೆ ತೋರಿದ ಪಂಚಾಯತ್‌ಗಳಿಗೆ ಬಹುಮಾನ ವಿತರಿಸಲಾಯಿತು. ಪಥ ಸಂಚಲನದಲ್ಲಿ ವಿಜೇತ ತಂಡಕ್ಕೆ ಬಹುಮಾನ ನೀಡಲಾಯಿತು.
(ವರದಿ- ಯೋಗೀಶ್ ಕುಂಭಾಸಿ)
Comments are closed.