ಕರಾವಳಿ

ಜಾಮೀನು ಪಡೆದ ಯುವಕನನ್ನು ಕರೆದೊಯ್ದ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು: ಸಾರ್ವಜನಿಕರ‌ ಆಕ್ರೋಷ (Video)

Pinterest LinkedIn Tumblr

ಕುಂದಾಪುರ: ಗಲಾಟೆ ಸಂಬಂಧಿತ ವಿಚಾರದಲ್ಲಿ ಜಾಮೀನು ಪಡೆದಿದ್ದರೂ‌ ಕೂಡ ಯುವಕನೋರ್ವನನ್ನು ಮಂಗಳವಾರ ಮುಂಜಾನೆ ಹೊತ್ತಿಗೆ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿರುವುದನ್ನು ಖಂಡಿಸಿ ಕಂಡ್ಲೂರಿನಲ್ಲಿರುವ ಗ್ರಾಮಾಂತರ ಠಾಣೆಯೆದುರು ನೂರಾರು‌ ಸಂಖ್ಯೆಯಲ್ಲಿ ಸಾರ್ವಜನಿಕರು ಜಮಾಯಿಸಿದ ಘಟನೆ ಮಂಗಳವಾರ ನಡೆದಿದೆ.

ಕಳೆದ ಬುಧವಾರ ನಡೆದ ಗಲಾಟೆ ವಿಚಾರದಲ್ಲಿ‌ ನಾಗರಾಜ್ ಎನ್ನುವ ಯುವಕನ ವಿರುದ್ಧ ಪ್ರಕರಣವೊಂದು ದಾಖಲಾಗಿದ್ದು ಅದಕ್ಕೆ ಆತ ತನ್ನ ವಕೀಲರ ಮೂಲಕ‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಜಾಮೀನು ಪಡೆದಿದ್ದ. ಆದರೆ ಏಕಾಏಕಿ‌ ಮಂಗಳವಾರ‌ ಮುಂಜಾನೆ ಆತನ ಮನೆಗೆ ಬಂದ ಪೊಲೀಸರು‌ ಆತನನ್ನು‌ ಠಾಣೆಗೆ ಕರೆದೊಯ್ದಿದ್ದಾರೆ. ವಿಚಾರ ತಿಳಿಯುತ್ತಲೇ ಬೈಂದೂರು ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರದ ನೂರಾರು‌ ಮಂದಿ ಪಕ್ಷಾತೀತವಾಗಿ ಠಾಣೆಯೆದುರು ಜಮಾಯಿಸಿದರು.

ಠಾಣೆ ಬಳಿ ಭೇಟಿ ನೀಡಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಘಟನೆ ಬಗ್ಗೆ ಈಗಾಗಲೇ ಎಸ್ಪಿಯವರ ಗಮನಕ್ಕೆ ತರಲಾಗಿದೆ. ಅವರು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಯಾವುದೋ ರಾಜಕೀಯ ಒತ್ತಡಕ್ಕೆ ಮಣಿದು ಪೊಲೀಸರು ಕೆಲಸ ಮಾಡುವುದು ಸರಿಯಲ್ಲ. ನಾನು‌ ಕೂಡ ನಾಲ್ಕು ಬಾರಿ ಶಾಸಕ‌ನಾಗಿದ್ದು ಪೊಲೀಸರಿಗೆ ಯಾವ ವಿಚಾರದಲ್ಲಿಯೂ ಒತ್ತಡ ಹಾಕಿಲ್ಲ. ಆದರೆ ಇದೀಗ ಪ್ರತಿ ಕೇಸಿನಲ್ಲೂ ರಾಜಕೀಯ ಹಸ್ತಕ್ಷೇಪವಾಗುತ್ತಿರುವ ದೂರುಗಳು ಕೇಳಿಬರುತ್ತಿದ್ದು ಇದನ್ನು ಸಹಿಸಲ್ಲ. ಮುಂದೆ ಇಂತಹ ಘಟನೆ ಪುನರಾವರ್ತನೆಯಾದರೆ ಸಂಬಂದಪಟ್ಟ ಠಾಣೆಯೆದುರು ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದರು.

ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಗೋಪಿಕೃಷ್ಣ, ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್ ಬಳಿಯೂ ಘಟನೆ ಸಂಬಂಧ‌ ಚರ್ಚೆ ನಡೆಸಿದರು. ಆರೋಪಿಯನ್ನು ವಿಚಾರಣೆ ಸಲುವಾಗಿ ಕರೆದಿದ್ದೆವು. ಬಾರದ ಕಾರಣ ಮನೆಗೆ ತೆರಳಿ ಕರೆತರಬೇಕಾಯಿತು ಎಂದು ಪೊಲೀಸರು ಈ ವೇಳೆ ಸ್ಪಷ್ಟನೆ ನೀಡಿದ್ದಾರೆನ್ನಲಾಗಿದೆ.

(ವರದಿ- ಯೋಗೀಶ್ ಕುಂಭಾಸಿ)

 

Comments are closed.