ಉಡುಪಿ: ಜಿಲ್ಲೆಯಲ್ಲಿ 2021-22 ಸಾಲಿಗೆ 10117.28 ಕೋಟಿ ರೂ ಗಳ ಸಾಲ ನೀಡಿಕೆ ಗುರಿ ಹೊಂದಲಾಗಿದ್ದು. ಕೃಷಿ ಕ್ಷೇತ್ರಕ್ಕೆ 4776.83 ಕೋಟಿ ರೂ, ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಉದ್ದಿಮೆಗಳಿಗೆ 2643.37 ಕೋಟಿ ರೂ. ಶೈಕ್ಷಣಿಕ ಕ್ಷೇತ್ರಕ್ಕೆ 162 ಕೋಟಿ ರೂ, ವಸತಿ ಕ್ಷೇತ್ರಕ್ಕೆ 930 ಕೋಟಿ ರೂ. ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಸಿಸಿಓ ಡಾ. ನವೀನ್ ಭಟ್ ಹೇಳಿದರು. ಅವರು ಗುರುವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
3 ನೇ ತ್ರೈಮಾಸಿಕ ಅವಧಿಯ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್ಗಳು 1983 ಕೋಟಿ ರೂ. ಸಾಲ ವಿತರಿಸಿ 82% ಸಾಧನೆ ತೋರಿದ್ದು, 1010 ಕೋಟಿ ರೂ ಕೃಷಿ ಕ್ಷೇತ್ರಕ್ಕೆ, 621 ಕೋಟಿ ರೂ. ಗಳನ್ನು ಸಣ್ಣ ಮತ್ತು ಮಧ್ಯಮ , ಸೂಕ್ಷ್ಮ ಕೈಗಾರಿಕೆಗಳಿಗೆ, 28 ಕೋಟಿ ರೂ ಗಳನ್ನು ಶೈಕ್ಷಣಿಕ ಕ್ಷೇತ್ರಕ್ಕೆ , 116 ಕೋಟಿ ರೂ ಗಳನ್ನು ವಸತಿ ಕ್ಷೇತ್ರಕ್ಕೆ ವಿತರಿಸಲಾಗಿದೆ. ಆದ್ಯತ ವಲಯಕ್ಕೆ 1833 ಕೋಟಿ ರೂ ಹಾಗೂ ಆದ್ಯೇತರ ವಲಯಕ್ಕೆ 150 ಕೋಟಿ ರೂ ಗಳನ್ನು ವಿತರಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ 8614 ಮಂದಿಗೆ 112 ಕೋಟಿ ರೂ. ವಿತರಿಸಲಾಗಿದೆ ಎಂದರು.ಜಿಲ್ಲೆಯ ವಿವಿಧ ಹಿಂದುಳಿದ ವರ್ಗಗಳ 83415 ಫಲಾನುಭವಿಗಳಿಗೆ 3006 ಕೋಟಿ ರೂ. ಗಳನ್ನು ಹಾಗೂ 36714 ಮಂದಿ ಅಲ್ಪ ಸಂಖ್ಯಾತರಿಗೆ 1375 ಕೋಟಿ ರೂ. ಗಳನ್ನು ವಿತರಿಸಲಾಗಿದೆ, 69046 ಮಹಿಳೆಯರಿಗೆ 2715 ಕೋಟಿ ರೂ ಹಣಕಾಸಿನ ನೆರವು ವಿತರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ತ್ರೈಮಾಸಿಕ ಅಂತ್ಯಕ್ಕೆ 28042 ಕೋಟಿ ಠೇವಣಿ ಸಂಗ್ರಹಿಸಿದ್ದು, 13018 ಕೋಟಿ ರೂ ಸಾಲ ವಿತರಿಸಿದ್ದು, ಜಿಲ್ಲೆಯ ಸಾಲ ಠೇವಣಿ ಅನುಪಾತ 46.42 ಆಗಿದೆ. ಇದು ನಿಗಧಿತ ಪ್ರಮಾಣಕ್ಕಿಂತ ಕಡಿಮೆಯಿದ್ದು ಬ್ಯಾಂಕ್ಗಳು ಹೆಚ್ಚಿನ ಪ್ರಮಾಣದಲ್ಲಿ ಸಾಲ ವಿತರಿಸಬೇಕು. ಶೈಕ್ಷಣಿಕ ಸಾಲ ಸೇರಿದಂತೆ ವಿವಿಧ ಸರ್ಕಾರಿ ಯೋಜನೆಯ ಫಲಾನುಭವಿಗಳ ಸಲ್ಲಿಸಿರುವ ಅರ್ಜಿಗಳನ್ನು ಮಾರ್ಚ್ ಅಂತ್ಯದೊಳಗೆ ವಿಲೇ ಮಾಡಿ ಸಾಲ ವಿತರಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ 12 ರೂ ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ 330 ರೂ ಗಳನ್ನು ಪಾವತಿಸಿ ಯೋಜನೆಯ ಫಲಾನುಭವಿಗಳಾದ ಹಲವು ಮಂದಿ ಯೋಜನೆಯ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಈ ಯೋಜನೆಯ ಫಲಾನುಭವಿಗಳಾದ ಖಾತೆದಾರರಿಗೆ ಅವರ ಮರಣದ ನಂತರ ವಿಮಾ ಹಣವನ್ನು ಅವರ ವಾರಿಸುದಾರರಿಗೆ ನೀಡುವ ಕುರಿತಂತೆ ಬ್ಯಾಂಕ್ಗಳು ಅಗತ್ಯ ಕ್ರಮ ಕೈಗೊಳ್ಳಬೇಕು. ಮೃತರ ಕುಟುಂಬದವರು ಖಾತೆಯನ್ನು ಕೊನೆಗೊಳಿಸಲು ಬ್ಯಾಂಕ್ಗೆ ಆಗಮಿಸಿದಾಗ ಪಾಸ್ ಬುಕ್ ಪರಿಶೀಲಿಸಿ ಅಧಿಕಾರಿಗಳು ಸೌಲಭ್ಯದ ಪ್ರಯೋಜನ ದೊರಕಿಸಬೇಕು. ಪಂಚಾಯತ್ಗಳು ಸೇರಿದಂತೆ ಕಂದಾಯ ಇಲಾಖೆಯಿಂದ ಮರಣ ಪ್ರಮಾಣಪತ್ರ ನೀಡುವಾಗ ಈ ಬಗ್ಗೆ ಮೃತರ ವಾರೀಸುದಾರರಿಗೆ ಮಾಹಿತಿ ನೀಡುವಂತಾಗಬೇಕು ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಸಭೆಗಳಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಜಿಲ್ಲೆಯಲ್ಲಿ ಈ ಯೋಜನೆಗಳಡಿ 1086 ಮಂದಿ ಮಾತ್ರ ಪ್ರಯೋಜನ ಪಡೆದಿದ್ದು, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ 327617 ಮತ್ತು ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆಯಡಿ 298812 ಮಾತ್ರ ನೊಂದಣಿ ಮಾಡಿದ್ದು, ಈ ಯೋಜನೆಯ ಸೌಲಭ್ಯವನ್ನು ಎಲ್ಲಾ ಬ್ಯಾಂಕ್ ಖಾತೆದಾರರಿಗೆ ಒದಗಿಸುವಂತೆ ಸೂಚಿಸಿದ ಅವರು, ಬ್ಯಾಂಕ್ ಖಾತೆ ತೆರೆಯುಯವಾಗಲೇ ಈ ಬಗ್ಗೆ ಮಾಹಿತಿ ನೀಡಿ ನೊಂದಣಿ ಮಾಡಿಕೊಳ್ಳಿ, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ, ನರೇಗಾ ಕಾರ್ಮಿಕರಿಗೆ, ಎಸ್.ಎಸ್.ಆರ್.ಎಂ ಸಿಬ್ಬಂದಿಗಳಿಗೆ , ಕೊರಗ ಕಾಲೊನಿಗಳಲ್ಲಿ ಈ ಕುರಿತು ಕ್ಯಾಂಪ್ಗಳನ್ನು ಆಯೋಜಿಸಿ ಯೋಜನೆಯ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸುವಂತೆ ಲೀಡ್ ಬ್ಯಾಂಕ್ ಮೆನೇಜರ್ಗೆ ಸೂಚಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ 2021-22 ನೇ ಸಾಲಿನ ಡಿಸ್ಟಿಕ್ ಕ್ರೆಡಿಟ್ ಪ್ಲಾನ್ ಪುಸ್ತಕ ಬಿಡುಗಡೆ ಮಾಡಲಾಯಿತು.
ಸಭೆಯಲ್ಲಿ ಕೆನರಾ ಬ್ಯಾಂಕ್ ಪ್ರಾದೇಶಿಕ ಮ್ಯಾನೇಜರ್ ಲೀನಾ ಪಿಟರ್ ಪಿಂಟೋ, ನಬಾರ್ಡ್ ಎಜಿಎಂ ಸಂಗೀತಾ ಕಾರ್ತಾ, ಲೀಡ್ ಬ್ಯಾಂಕ್ ಮ್ಯಾನೇಜರ್ ರುದ್ರೇಶ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಪ್ರಬಂದಕ ಕಾಳೆ, ಯೂನಿಯನ್ ಬ್ಯಾಂಕ್ ಪ್ರಬಂದಕ ಡಾ.ವಾಸಪ್ಪ , ವಿವಿಧ ಇಲಾಖೆಗಳ ಮತ್ತು ಬ್ಯಾಂಕ್ ಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Comments are closed.