ಮಂಗಳೂರು: ನಗರದ ಸಂತ ತೆರೆಜಾ ಚರ್ಚ್, ಪಾಲ್ದಾನೆಯಲ್ಲಿ ನಿನ್ನೆ ಪವಿತ್ರ ಗುರುವಾರದ ಬಲಿಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಲಿಪೂಜೆಯಲ್ಲಿ ಭಾಗವಹಿಸಿದ ಮಂಗಳೂರು ಧರ್ಮಪ್ರಾಂತ್ಯದ ಜ್ಯುಡಿಷಿಯಲ್ ವಿಕಾರ್ ವಂದನೀಯ ಫಾ| ವಾಲ್ಟರ್ ಡಿಮೆಲ್ಲೊ ಅವರು ಏಸುಕ್ರಿಸ್ತರು ತನ್ನ 12 ಜನ ಶಿಷ್ಯರ ಕಾಲು ತೊಳೆದ ಸಂಕೇತವಾಗಿ ಚರ್ಚಿನಿಂದ ಆರಿಸಲ್ಪಟ್ಟ 12 ಜನರ ಕಾಲುಗಳನ್ನು ತೊಳೆಯುವ ಕಾರ್ಯವನ್ನು ನೆರವೇರಿಸಿದರು.
ಅವರು ತನ್ನ ಪ್ರವಚನದಲ್ಲಿ ಏಸುಕ್ರಿಸ್ತರು ತನ್ನ ಜೀವನದುದ್ದಕ್ಕೂ ಪರರ ಸೇವೆ ಹಾಗೂ ಕಷ್ಟ ಕಾರ್ಪಣ್ಯದಲ್ಲಿ ಸಿಲುಕಿದ ಜನರನ್ನು ಸಂತೈಸಿ, ಮನುಕುಲದ ಸೇವೆಯೇ ಶ್ರೇಷ್ಠ ಎಂದು ತೋರಿಸಿಕೊಟ್ಟರು.
ನಾವು ನಮ್ಮ ಸುತ್ತಮುತ್ತಲಿನ ಜನರ ಸೇವೆಗೆ ಹೆಚ್ಚು ಮಹತ್ವ ನೀಡಬೇಕೆಂದು ಹೇಳಿದರು. ಬಲಿಪೂಜೆಯ ಪ್ರಧಾನ ನೇತ್ರತ್ವ ವಹಿಸಿದ ಚರ್ಚಿನ ಧರ್ಮ ಗುರುಗಳಾದ ವಂದನೀಯ ಆಲ್ಬನ್ ಡಿಸೋಜ ಅವರು ಈ ದಿನದ ಮಹತ್ವವನ್ನು ವಿವರಿಸಿದರು.
ಬಲಿಪೂಜೆಯಲ್ಲಿ ಚರ್ಚಿನ ಉಪಾಧ್ಯಕ್ಷರಾದ ವಿಲಿಯಂ ಲೋಬೊ, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಹಾಗೂ ಸಾವಿರಾರು ಭಕ್ತಾಧಿಗಳು ಭಾಗವಹಿಸಿದರು.
Comments are closed.