ತೈಪೇ: ತೈವಾನ್ ನಲ್ಲಿ ಭೀಕರ ರೈಲು ಅಪಘಾತ ಸಂಭವಿಸಿದ್ದು, ರೈಲು ಹಳಿ ತಪ್ಪಿದ್ದರಿಂದ ಅದರಲ್ಲಿದ್ದ ಕನಿಷ್ಠ 36 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ತೈವಾನ್ ನ ಕರಾವಳಿ ನಗರ ಹುವಾಲಿಯನ್ ನ ಪೂರ್ವ ರೈಲ್ವೆ ಮಾರ್ಗದ ಸುರಂಗದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಕನಿಷ್ಟ 36 ಮಂದಿ ಸಾವನ್ನಪ್ಪಿದ್ದಾರೆ ಎಂದು ತೈವಾನ್ ಸರ್ಕಾರ ಮಾಹಿತಿ ನೀಡಿದೆ. ಸ್ಥಳೀಯ ಕಾಲಮಾನದ ಪ್ರಕಾರ ಬೆಳಗ್ಗೆ 9.30ಕ್ಕೆ ಈ ದುರಂತ ಸಂಭವಿಸಿದ್ದು, ಸ್ಥಳದಲ್ಲೇ ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ರೈಲಿನ ಸುಮಾರು 5ಕ್ಕೂ ಹೆಚ್ಚು ಬೋಗಿಗಳು ಜಖಂ ಆಗಿದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.
ಇನ್ನು ಅಪಘಾತದ ತೀವ್ರತೆ ದೊಡ್ಡ ಪ್ರಮಾಣದ್ದು ಎಂದು ಹೇಳಲಾಗುತ್ತಿದ್ದು, ಸ್ವತಃ ತೈವಾನ್ ಅಧ್ಯಕ್ಷರಾದ ತ್ಸೈ ಇಂಗ್-ವೆನ್ ಅವರು ಹುವಾಲಿಯನ್ ಆಸ್ಪತ್ರೆಗಳಿಗೆ ಬೃಹತ್ ಪ್ರಮಾಣದ ಚಿಕಿತ್ಸೆಗೆ ಸಿದ್ಧರಾಗಿ ಎಂದು ಸೂಚನೆ ನೀಡಿದ್ದಾರೆ. ಅಲ್ಲದೆ ದುರಂತದಲ್ಲಿ ಸಿಲುಕಿರುವವರ ರಕ್ಷಣೆಗೆ ಪ್ರಧಾನ ಒತ್ತು ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದು ದುರಂತದ ಕುರಿತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.
ಇದೇ ರೈಲು ಮಾರ್ಗದಲ್ಲೇ 2018ರಲ್ಲೂ ಹಳಿ ತಪ್ಪಿದ ದುರಂತ ಸಂಭವಿಸಿತ್ತು. ಈ ವೇಳೆ 18 ಮಂದಿ ಸಾವನ್ನಪ್ಪಿದ್ದರು.
Comments are closed.