ಕರಾವಳಿ

ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಯೋಗ ಶಿಬಿರದಲ್ಲಿ ಯುಗಾದಿ ಹಾಗೂ ವಿಷು ಹಬ್ಬ ಆಚರಣೆ

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆಯುತ್ತಿರುವ ಯೋಗ ಶಿಬಿರದಲ್ಲಿ ಬುಧವಾರ ಯುಗಾದಿ ಹಾಗೂ ವಿಷು ಹಬ್ಬವನ್ನು ಆಚರಿಸಲಾಯಿತು.

ಎಸ್ ಡಿ ಎಂ ಬಿಸಿನೆಸ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಪ್ರೊ. ದೇವರಾಜ್ ಯುಗಾದಿ ಸಂದೇಶ ನೀಡಿ ಮಾತನಾಡಿ, ಈ ಬಾರಿ ವಿಶೇಷವಾಗಿ ಚಾಂದ್ರಮಾನ ಹಾಗೂ ಸೌರಮಾನ ಯುಗಾದಿ ಎರಡು ಜತೆಯಾಗಿ ಬಂದಿದೆ. ಪ್ರತಿಯೊಬ್ಬರ ಬಾಳಿನಲ್ಲಿ ಹೊಸ ಸಂವತ್ಸರ ಸುಖ, ಸಮೃದ್ಧಿಯನ್ನು ನೀಡಲಿ. ಸಿಹಿ ಕಹಿಯ ಸಮ್ಮಿಳಿತದಲ್ಲಿ ಎಲ್ಲರ ಬಾಳು ಸಿಹಿಯಾಗಿರಲಿ ಎಂದು ಶುಭ ಹಾರೈಸಿದರು.

ನಿವೃತ್ತ ಬ್ಯಾಂಕ್ ಅಧಿಕಾರಿ ಸುಬ್ರಾಯ ನಾಯಕ್ ಮಾತನಾಡಿ, ಯೋಗ ಶಿಬಿರದ ಸುಸಂದರ್ಭದಲ್ಲಿ ಯುಗಾದಿ ಬಂದಿರುವುದು ನಮ್ಮ ಭಾಗ್ಯ. ಯೋಗದಿಂದ ಆರೋಗ್ಯ ಸಮತೋಲನ ಕಾಪಾಡಲು ಸಾಧ್ಯ. ಪ್ರತಿಯೊಬ್ಬರೂ ತಪ್ಪದೆ ಯೋಗಾಭ್ಯಾಸ ಮಾಡಿ, ಹೊಸ ವರ್ಷದ ಆರಂಭದಲ್ಲೇ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸೋಣ ಎಂದು ಶುಭ ಹಾರೈಸಿದರು.

ಯೋಗಗುರು ಜಗದೀಶ್ ಶೆಟ್ಟಿ ಬಿಜೈ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಹಿರಿಯ ಪತ್ರಕರ್ತ ರಾಘವ ಶುಭ ಹಾರೈಸಿ ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಭಾಸ್ಕರ ರೈ ಕಟ್ಟ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಆರ್.ಸಿ.ಭಟ್ ವಂದಿಸಿದರು.

Comments are closed.