ಕರ್ನಾಟಕ

ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ತೀವ್ರ ವಿಚಾರಣೆ ನಡೆಸುತ್ತಿರುವ ಪೊಲೀಸರು

Pinterest LinkedIn Tumblr

ಬಿಬಿಎಂಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿತ್ತು. ಗುರುವಾರ ಬೆಳಗ್ಗೆ ನಡುರಸ್ತೆಯಲ್ಲೇ ರೇಖಾ ಅವರ ಕತ್ತು ಸೀಳಿ, ದೇಹಕ್ಕೆ 12 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಕಾಲಿಗೆ ನಿನ್ನೆ ಗುಂಡು ಹಾರಿಸಿ, ಬಂಧಿಸಿದ್ದ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದರು. ನಿನ್ನೆ ರೇಖಾ ಕೊಲೆ ಆರೋಪಿಗಳಾದ ಸೂರ್ಯ ಮತ್ತು ಪೀಟರ್ ಮೇಲೆ ಫೈರಿಂಗ್ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಸ್ಟೀಫನ್, ಅಜಯ್, ಪುರುಷೋತ್ತಮ್ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪುರುಷೋತ್ತಮ್ ಈ ಕೊಲೆಯ ದೃಶ್ಯಗಳು ರೆಕಾರ್ಡ್ ಆಗದಂತೆ ಆ ಏರಿಯಾದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ತಿರುಗಿಸಿದ್ದ. ನಿನ್ನೆ ಮಧ್ಯಾಹ್ನ ಪೀಟರ್ ಮತ್ತು ಸೂರ್ಯನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಒಟ್ಟು ಐವರನ್ನು ಬಂಧಿಸಲಾಗಿದ್ದು, ನಿನ್ನೆ ಸುಮಾರು 5 ಗಂಟೆಗೂ ಅಧಿಕ ಕಾಲ ಪ್ರಮುಖ ಆರೋಪಿ ಮಾಲ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಎಸಿಪಿ ರವಿ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ, ಚಿದಾನಂದ್ ಅವರಿಂದ ವಿಚಾರಣೆ ನಡೆಸಲಾಗಿದ್ದು, ಪ್ರಮುಖ ಆರೋಪಿ ಮಾಲ ಅವರಿಗೆ ಹತ್ತಾರು ಪ್ರಶ್ನೆಗಳನ್ನು ಕೇಳಲಾಗಿದೆ. ಆದರೆ, ಈ ವೇಳೆ ಮಾಲ ಅಸ್ಪಷ್ಟ ಉತ್ತರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪೊಲೀಸರ ವಿಚಾರಣೆ ವೇಳೆ ಮಾಲಾ ಅವರು ರೇಖಾ ಹತ್ಯೆ ಬಗ್ಗೆ ನನಗೆ ಏನು ಗೊತ್ತಿಲ್ಲ, ನಾನು ಏನು ಮಾಡಿಲ್ಲ. ರೇಖಾ ಕೊಲೆಯಲ್ಲಿ ನನ್ನ ರೋಲ್ ಇಲ್ಲ ಎಂದು ಪೊಲೀಸರ ಬಳಿ ಉತ್ತರ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಹೀಗಾಗಿ ಮಾಲ ಹೇಳಿಕೆಯಿಂದ ತೃಪರಾಗದ ಪೊಲೀಸರು ಕೆಲವು ಪೂರಕ ಸಾಕ್ಷ್ಯಾಧಾರಗಳನ್ನ ಕಲೆ ಹಾಕುತ್ತಿದ್ದಾರೆ. ರೇಖಾ ಕೊಲೆ ನಂತರ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರದ ಬಗ್ಗೆ ತನಿಖೆ ನಡೆಸುತ್ತಿದ್ದು, ಮುಂದೆ ಬಿಬಿಎಂಪಿ ಚುನಾವಣೆ ಇರೋದ್ರಿಂದ ಈ ಆಯಾಮದಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ರೇಖಾ ಕೊಲೆಯಾದರೆ ಮಾಲಗೆ ಹೆಚ್ಚುವ ಲಾಭ ಎನ್ನುವ ಮಾತುಗಳು ಕೇಳಿ ಬರುತ್ತಿರೋ ಹಿನ್ನಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಕೆಲವು ಪೂರಕ ಸಾಕ್ಷ್ಯಗಳನ್ನ ಸಂಗ್ರಹಿಸಿ ಮತ್ತೊಮ್ಮೆ ವಿಚಾರಣೆ ನಡೆಸಲು ಪೊಲೀಸರ ತಯಾರಿ ನಡೆಸಿದ್ದಾರೆ ಎನ್ನಲಾಗುತ್ತಿದೆ.

ಮಾಜಿ ಕಾರ್ಪೊರೇಟರ್ ರೇಖಾ ಹತ್ಯೆ ಪ್ರಸ್ತುತ ಇಡೀ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಸಿಎಂ ಯಡಿಯೂರಪ್ಪ ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಣಮಿಸಿದ್ದಾರೆ. ಅಲ್ಲದೆ, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಿ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸುವಂತೆ ಪೊಲೀಸರಿಗೆ ಸೂಚಿಸಿದ್ದರು.

ಅದರಂತೆ ಪೊಲೀಸರೂ ಸಹ ಮಿಂಚಿನ ಕಾರ್ಯಾಚರಣೆ ನಡೆಸಿ ಘಟನೆ ನಡೆದ ಒಂದೇ ದಿನದಲ್ಲಿ ಆರೋಪಿಗಳನ್ನು ಬಂಧಿಸಿ ಇದೀಗ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಆದರೆ, ಕೊಲೆ ನೈಜ ಕಾರಣ ಇನ್ನೂ ತಿಳಿಯದೇ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದು, ಶೀಘ್ರದಲ್ಲಿ ಈ ಪ್ರಕರಣ ಇತ್ಯರ್ಥವಾಗುವ ಇಂಗಿತವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Comments are closed.