ಕಾರವಾರ: ಉತ್ತರಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ಸಾಗರ ರಸ್ತೆಯ ಕೋಣಾರ ಗುಡ್ಡದ ನಿರ್ಜನ ಪ್ರದೇಶದಲ್ಲಿ 2012ರಲ್ಲಿ ನಡೆದಿದ್ದ ಕಲ್ಪನಾ ಮಹಾಲೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಜಿಲ್ಲಾ ನ್ಯಾಯಾಲಯ ಪ್ರಕಟಿಸಿದ್ದ ತೀರ್ಪನ್ನು ಧಾರವಾಡ ಹೈಕೋರ್ಟ್ ಎತ್ತಿಹಿಡಿದಿದೆ.
ಘಟನೆ ಹಿನ್ನೆಲೆ:
2012ರ ನವೆಂಬರ್ 4ರಂದು ಭಟ್ಕಳ ಸೋನಾರಕೇರಿಯ ಕಲ್ಪನಾ ಮಹಾಲೆ ಎನ್ನುವ ಮಹಿಳೆ ಕುಪ್ಪಸ ಹೊಲಿಸಲು ಹೋಗುವುದಾಗಿ ಮನೆಯಿಂದ ತೆರಳಿ ನಿಗೂಢವಾಗಿ ನಾಪತ್ತೆಯಾಗಿದ್ದು ನ.8 ರಂದು ಆಕೆ ಪತಿ ಭಟ್ಕಳ ಶಹರ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು. ನ.11 ರಂದು ಆಕೆ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಭಟ್ಕಳ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಟೋ ಚಾಲಕನೊಬ್ಬ ನೀಡಿದ ಮಹತ್ವದ ಸುಳಿವಿನ ಆಧಾರದಲ್ಲಿ ತಾಲೂಕಿನ ಮುಂಡಳ್ಳಿಯ ಸದಾಶಿವ ನಾಯ್ಕ ಹಾಗೂ ನಾಗರಾಜ ನಾಯ್ಕ ಎನ್ನುವರನ್ನು ಬಂಧಿಸಲಾಗಿ ಚಿನ್ನಾಭರಣ ವಶಕ್ಕೆ ಪಡೆಯಲಾಗಿತ್ತು. ಮಹಿಳೆ ತಲೆ ಮೇಲೆ ಕಲ್ಲೆತ್ತಿಹಾಕಿ ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಗೆ ಹೇಳಿಕೆಯನ್ನು ದಾಖಲಿಸಲಾಗಿತ್ತು. 30 ಮಂದಿ ಸಾಕ್ಷಿದಾರರ ವಿಚಾರಣೆ ನಡೆಸಿದ ಕಾರವಾರದ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ವಿಠ್ಠಲ್ ಎಸ್.ಧಾರವಾಡಕರ್ ಅವರು ಸಾಕ್ಷ್ಯದ ಕೊರತೆ ಹಿನ್ನೆಲೆ ಆರೋಪಿಗಳನ್ನ ದೋಷಮುಕ್ತ ಮಾಡಿ 2018ರ ಮಾರ್ಚ್ 26ರಂದು ಆದೇಶ ಹೊರಡಿಸಿದ್ದರು.
ಮಹಿಳೆ ಕೊಲೆ ಪ್ರಕರಣವಾದ್ದರಿಂದ ಸರ್ಕಾರ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಈ ಬಗ್ಗೆ ಪ್ರಶ್ನಿಸಿದ್ದು, ವಿಡಿಯೋ ಕಾನ್ಛರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್. ದೇವದಾಸ್ ಹಾಗೂ ಜೆ.ಎಂ.ಖಾಜೀ ಅವರಿದ್ದ ಪೀಠವು ಸಾಕ್ಷಿದಾರರ ಹೇಳಿಕೆಯಲ್ಲಿನ ವ್ಯತ್ಯಾಸಗಳು ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ವಸ್ತುಗಳನ್ನು ವಶಕ್ಕೆ ಪಡೆಯುವಾಗ ಆದಂತಹ ದೋಷಗಳನ್ನು ಮನಗಂಡು ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾ ಮಾಡಿ, ಕಾರವಾರ ಸೆಷನ್ಸ್ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದ್ದಾರೆ.
ಆರೋಪಿಗಳ ಪರವಾಗಿ ಕುಂದಾಪುರದ ಹಿರಿಯ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.
Comments are closed.