ಕುಂದಾಪುರ: ಕುಂದಾಪುರ ಡಿವೈಎಸ್ಪಿ ಅವರ ಮಾರ್ಗದರ್ಶನದಲ್ಲಿ ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ಪೊಲೀಸರ ತಂಡ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದೆ.
ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಬೈಂದೂರು ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜಾ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿಗಳು ನಾವುಂದದ ರೈಲ್ವೇ ಸೇತುವೆ ಬಳಿ ಸೋಮವಾರ ಸಂಜೆ ಸುಮಾರಿಗೆ ಕೊಡೇರಿ ಬೈಲ್ಕಿನಬಾಗಿಲು ಹಾಲಿ ನಿವಾಸಿ ಜಾಫರ್ ಸಾದಿಕ್ (42) ಎನ್ನುವ ಆರೋಪಿಯನ್ನು ಬಂಧಿಸಿದ್ದಾರೆ.
ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಈತನಿಂದ 15 ಸಾವಿರ ಮೌಲ್ಯದ ಅರ್ಧ ಕೆಜಿ ತೂಕದ ಗಾಂಜಾ, ಈ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನ, ಮೊಬೈಲ್ ಪೋನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.