(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕೋವಿಡ್ ನಿಂದಾಗಿ ಭಾಗಶಃ ಸಂಚಾರವನ್ನು ಸ್ಥಗಿತಗೊಳಿಸಿದ್ದ ಬೆಂಗಳೂರು-ಕಾರವಾರ ರೈಲು ಆ.16ರಿಂದ ಹೊಸ ವಿಸ್ಟಾಡೋಮ್ ಕೋಚ್ನೊಂದಿಗೆ ಮತ್ತೆ ಸಂಚಾರಕ್ಕೆ ಮುಕ್ತವಾಗಿದ್ದು ಈ ರೈಲನ್ನು ಕುಂದಾಪುರ ರೈಲು ನಿಲ್ದಾಣದಲ್ಲಿ ಆ.16 ಸೋಮವಾರದಂದು ಸಂಭ್ರಮದಿಂದ ಸ್ವಾಗತಿಸಲಾಯಿತು.
ಕೊಂಕಣ ರೈಲ್ವೇ ವಿಭಾಗೀಯ ಅಧಿಕಾರಿ ಬಿ.ಬಿ
ನಿಕ್ಕಂ ಕುಂದಾಪುರದಲ್ಲಿ ರೈಲನ್ನು ಬರಮಾಡಿಕೊಂಡು ಪ್ರಯಾಣಿಕರಿಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ರೈಲ್ವೇ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ಉಪಾಧ್ಯಕ್ಷ ರಾಜೇಶ್ ಕಾವೇರಿ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಸಂಚಾಲಕ ವಿವೇಕ್ ನಾಯಕ್, ತಾಂತ್ರಿಕ ಸಲಹೆಗಾರ ಗೌತಮ್ ಶೆಟ್ಟಿ, ಗೌರವ ಅಧ್ಯಕ್ಷ ಕೆಂಚನೂರು ಸೋಮಶೇಖರ್ ಶೆಟ್ಟಿ, ಸದಸ್ಯರಾದ ಕಿಶೋರ್ ಕುಮಾರ್, ಜಾಯ್ ಕರ್ವೆಲ್ಲೋ, ಶ್ರೀಧರ್ ಸುವರ್ಣ, ಉದಯ್ ಭಂಡಾರ್ಕರ್, ಪದ್ಮನಾಭ ಶೆಣೈ, ಧರ್ಮಪ್ರಕಾಶ್, ನಾಗರಾಜ ಆಚಾರ್, ರಾಘವೇಂದ್ರ ಶೇಟ್, ಮಹೇಶ್ ಶೆಣೈ, ಗೌರವ ಸಲಹೆಗಾರ ಎಚ್.ಎಸ್. ಹತ್ವಾರ್,ಮಾಜಿ ಜಿ.ಪಂ ಸದಸ್ಯ ಗಣಪತಿ ಟಿ.ಶ್ರೀಯಾನ್, ಕಂದಾವರ ಗ್ರಾ.ಪಂ ಅಧ್ಯಕ್ಷೆ ಬಾಬಿ, ಸದಸ್ಯರಾದ ರಾಮಚಂದ್ರ ಶೇರಿಗಾರ್, ಜಯಶ್ರೀ ಶೆಟ್ಟಿ, ಅನುಪಮ ಶೆಟ್ಟಿ, ರವೀಂದ್ರ ದೇವಾಡಿಗ, ಅಭಿಜಿತ್ ಕೊಠಾರಿ, ಜ್ಯೋತಿ, ಮಾಜಿ ಸದಸ್ಯ ಸಂತೋಷ ಪೂಜಾರಿ, ಲಯನ್ಸ್ ಕ್ಲಬ್ ಅಮೃತಧಾರ ಕುಂದಾಪುರದ ಅಧ್ಯಕ್ಷೆ ಸರಸ್ವತಿ ಜಿ. ಪುತ್ರನ್, ಕಾರ್ಯದರ್ಶಿ ಜಯಶೀಲಾ ಕಾಮತ್, ರಾಷ್ಟ್ರ ಸೇವಿಕಾ ಕಾರ್ಯವಾಹ್ ಕಲ್ಪನಾ ಭಾಸ್ಕರ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್’ನ ಭರತ ಬಂಗೇರ, ಶಶಿಧರ್, ಅರುಣ್ ಕುಮಾರ್, ಪ್ರತೀಕ್ ಇದ್ದರು. ಇದೆ ಸಂದರ್ಭ ರೈಲು ನಿಲ್ದಾಣದ ಎದುರಿನ ಹೈಮಾಸ್ಟ್ ವಿದ್ಯುತ್ ದೀಪವನ್ನು ಉದ್ಘಾಟಿಸಿದ್ದು ರೈಲ್ವೇ ಅಧಿಕಾರಿಯನ್ನು ಹಿತರಕ್ಷಣಾ ಸಮಿತಿಯಿಂದ ಗೌರವಿಸಲಾಯಿತು.
ಯಶವಂತಪುರ–ಕಾರವಾರ ಮಾರ್ಗದಲ್ಲಿ ವಾರದಲ್ಲಿ ಮೂರು ದಿನ ಸಂಚರಿಸುವ ಈ ರೈಲು ಮೊದಲು ಮಂಗಳೂರು ಜಂಕ್ಷನ್ವರೆಗೆ ಮಾತ್ರ ಸಂಚರಿಸುತ್ತಿದ್ದು ಕಾರವಾರಕ್ಕೆ ಸಂಚಾರವನ್ನು ಸ್ಥಗಿತಗೊಳಿಸಿತ್ತು. ಇದೀಗ ಮತ್ತೆ ರೈಲು ಸಂಚಾರ ಪುನಾರಂಭವಾಗಿದ್ದು, ಆ.16ರಿಂದ ರೈಲು ಕಾರವಾರದವರೆಗೂ ಸಂಚರಿಸಲಿದೆ. 06211 ರೈಲು ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರ ಯಶವಂತಪುರದಿಂದ ಕಾರವಾರಕ್ಕೆ ಹೊರಡಲಿದ್ದು, 06212 ರೈಲು ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರ ಕಾರವಾರದಿಂದ ಯಶವಂತಪುರಕ್ಕೆ ಹೊರಡಲಿದೆ. ಪ್ರಕೃತಿಯ ರಮಣೀಯತೆ, ಪಶ್ಚಿಮ ಘಟ್ಟಗಳ ಸೊಬಗಿನ ನೋಟವನ್ನು ವಿಸ್ಟಾಡೋಮ್ ಕೋಚ್ನಲ್ಲಿ ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು. ನದಿಗಳು, ಬೆಟ್ಟಗುಡ್ಡಗಳು, ಕೃಷಿಭೂಮಿ, ತೊರೆಗಳು ಸಹಿತ ನಯನಮನೋಹರ ದೃಶ್ಯಗಳ ಸೊಬಗು ವೀಕ್ಷಿಸಲು ಕರಾವಳಿಯಿಂದ ಕಾರಾವರದವರೆಗೂ ಅವಕಾಶವಿದೆ.
ರೈಲ್ವೇ ಹಿತರಕ್ಷಣಾ ಸಮಿತಿಯ ಹೋರಾಟ..
ಕುಂದಾಪುರ ರೈಲು ನಿಲ್ದಾಣದಲ್ಲಿ ವಿವಿಧ ಕಡೆ ತೆರಳುವ ರೈಲು ನಿಲುಗಡೆ, ರೈಲು ನಿಲ್ದಾಣದ ಮೂಲಸೌಕರ್ಯ, ರಸ್ತೆ, ವಿದ್ಯುತ್ ಸೌಕರ್ಯ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಮೊದಲಿನಿಂದಲೂ ರೈಲ್ವೇ ಹಿತರಕ್ಷಣಾ ಸಮಿತಿ ಹೋರಾಡುತ್ತಲೇ ಬಂದಿದ್ದು ಬಹುತೇಕ ಎಲ್ಲಾ ಕಾರ್ಯ ಫಲಪ್ರದವಾಗಿದೆ. ಕಾರವಾರಕ್ಕೆ ರೈಲು ಸಂಚಾರ ಸ್ಥಗಿತವಾದ ಬಳಿಕ ಸ್ಥಳೀಯ ಪ್ರಯಾಣಿಕರು ಹಾಗೂ ಸಾರ್ವಜನಿಕರ ಅಹವಾಲಿನ ಮೇರೆ ಕಾರವಾರದವರೆಗೆ ರೈಲು ಸಂಚಾರ ಪುನರಾರಂಭಿಸಲು ಹಾಗೂ ವಿಸ್ಟಾಡೋಮ್ ಕೋಚ್ ಕಾರವಾರ ರೈಲಿಗೂ ಅಳವಡಿಸಲು ಹೋರಾಟ ಮಾಡಲಾಗಿತ್ತು. ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸಹಿತ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳಿಗೆ ಹೋರಾಟಸಮಿತಿ ಮನವಿ ನೀಡಿದ್ದು ಸೂಕ್ತ ಸ್ಪಂದನೆ ಸಿಕ್ಕಂತಾಗಿದೆ.
Comments are closed.