ಆರೋಗ್ಯ

ಕುಂದಾಪುರ ಸಾರ್ವಜನಿಕ ‌ಆಸ್ಪತ್ರೆಯ ಆಕ್ಸಿಜನ್ ಫ್ಲಾಂಟ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ ಕೇಂದ್ರ ಸಚಿವೆ ಶೋಭಾ‌ ಕರಂದ್ಲಾಜೆ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಮಿಷಕ್ಕೆ 500 ಲೀ ಆಕ್ಸಿಜನ್ ಉತ್ಪಾದಿಸುವ ಘಟಕ ಉದ್ಘಾಟನೆಗೆ ಸಿದ್ಧವಾಗಿದೆ. ಅದರ ಉದ್ಘಾಟನೆಯನ್ನು ಪೆಟ್ರೋಲಿಯಂ ಸಚಿವರು ಮಾಡುವ ಬಗ್ಗೆ ಮಾಹಿತಿಯಿದ್ದು ಹಾಗಾಗಿ ಸ್ವಲ್ಪ ದಿನ ಮುಂದೂಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಆದಷ್ಟು ‌ಶೀಘ್ರ ಈ ಘಟಕ‌ ಲೋಕಾರ್ಪಣೆಯಾಗಲಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ಅವರು ಗುರುವಾರ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಆಕ್ಸಿಜನ್ ಘಟಕ ವೀಕ್ಷಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಹರೀಶ್ ಬಂಗೇರ ಬಿಡುಗಡೆಯೇ ಅದೃಷ್ಟ..
ಸೌದಿಯಲ್ಲಿ ಬಂಧನಕ್ಕೊಳಗಾದ ಹರೀಶ್ ಬಂಗೇರ ಅವರ ಬಿಡುಗಡೆ ಕಷ್ಟದಲ್ಲಿಯೇ ಆಗಿದೆ. ಅಲ್ಲಿನ ದೊರೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ ಎನ್ನುವ ಆರೋಪದಲ್ಲಿ‌ಅವರ ಬಂಧನವಾಗಿತ್ತು. ಅಲ್ಲಿನ‌ ಕಾನೂನು ಪ್ರಕಾರ ಸಾಮಾನ್ಯವಾಗಿ ರಾಜ ಪರಿವಾರದ ಬಗ್ಗೆ ಆ ರೀತಿಯ ಯಾವುದೇ ಮಾಹಿತಿ ಬಂದರೂ‌ ಕೂಡ ಕಠಿಣ ಶಿಕ್ಷೆ ಕೊಡುತ್ತಾರೆ. ಹರೀಶ್ ಬಂಗೇರ ಅವರ ಅದೃಷ್ಟ. ಇಷ್ಟು ದಿನ ಅವರು ಜೈಲಿನಲ್ಲಿ ಬದುಕಿದ್ದರು. ಹಾಗೂ ಅವರನ್ನು ಬಿಡುಗಡೆ ಮಾಡಲು ಸಾಕಷ್ಟು ಪ್ರಯತ್ನ ನಡೆದಿದೆ. ಸತ್ಯವನ್ನು ಸಾಭೀತು ಮಾಡಿದ ಮೇಲೆ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದ್ದು ನಮಗೆಲ್ಲರಿಗೂ ಇದು ಸಂತೋಷ ತಂದಿದೆ ಎಂದರು.

ಕುಂದಾಪುರ ಫ್ಲೈಓವರ್ ಉದ್ಘಾಟನೆ ಜನರೇ ಮಾಡಿದ್ದಾರೆ…
ಕುಂದಾಪುರ ಫ್ಲೈ ಓವರ್‌ ಉದ್ಘಾಟನೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಉದ್ಘಾಟನೆಯನ್ನು ಜನರೇ ಮಾಡಿದ್ದಾರೆ. ಈ ಭಾಗದ ಶಾಸಕರು ಯಾವುದೇ ಉದ್ಘಾಟನೆಗೂ ಬರುವುದಿಲ್ಲವಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕುಂದಾಪುರ ಬೊಬ್ಬರ್ಯನಕಟ್ಟೆ ಬಳಿ ಸರಕಾರಿ ಕಚೇರಿಗಳಿಗೆ ತೆರಳಲು ವಾಹನ ಸವಾರರಿಗೆ ಅನುಕೂಲವಾಗುವಂತೆ ಹೆದ್ದಾರಿಯಲ್ಲಿ ವ್ಯವಸ್ಥೆ ಕಲ್ಪಿಸಲು ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಕಿರಣ್ ಕೊಡ್ಗಿಯವರ ಸಹಿತ ಹಲವರು ಗಮನಕ್ಕೆ ತಂದಿದ್ದು ಈ ಬೇಡಿಕೆಯ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕುಂದಾಪುರ ಸಹಾಯಕ ಕಮಿಷನರ್ ಕೆ. ರಾಜು, ತಹಶಿಲ್ದಾರ್ ಕಿರಣ್ ಗೌರಯ್ಯ, ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಬರ್ಟ್ ರೆಬೆಲ್ಲೋ, ಕುಂದಾಪುರ ಕೋವಿಡ್ ಆಸ್ಪತ್ರೆ‌ ನೊಡಲ್ ಅಧಿಕಾರಿ‌ ಡಾ. ನಾಗೇಶ್, ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಉಪಾಧ್ಯಕ್ಷ ಕಿರಣ್ ಕೊಡ್ಗಿ, ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ನಗರ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್. ಪೂಜಾರಿ, ಬಿಜೆಪಿ ಜಿಲ್ಲಾ ಅಧ್ಯಕ್ಷ ಕುಯಿಲಾಡಿ‌‌ ಸುರೇಶ್ ನಾಯಕ್, ಮುಖಂಡ ಉದಯ್ ಕುಮಾರ್ ಶೆಟ್ಟಿ, ಜಿಲ್ಲಾ ಹಾಗೂ ತಾಲೂಕು ಮುಖಂಡರು ಈ‌ ಸಂದರ್ಭ ಇದ್ದರು.

Comments are closed.