ಬೆಂಗಳೂರು: ಬೆಂಗಳೂರಿನ ನಗರದ ತಿಂಡ್ಲುವಿನ ವಿದ್ಯಾರಣ್ಯಪುರದ ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ಕೆ ಬಳಸಲು ಆನೆಯನ್ನು ಇರಿಸಿಕೊಂಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೈಕೋರ್ಟ್, ಆನೆಗಳು ಕಾಡಿನಲ್ಲಿ ಇರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ. ಪೂಜಾ ಕಾರ್ಯಕ್ರಮಕ್ಕೆ ಆನೆಗಳನ್ನು ಬಳಸಿಕೊಳ್ಳುವುದು ಕ್ರೌರ್ಯವೇ ಆಗುತ್ತದೆ ಎಂದು ಹೇಳಿದೆ.
(ಸಾಂದರ್ಭಿಕ ಚಿತ್ರ)
ಈ ಕುರಿತು ಸಲ್ಲಿಸಿದ್ದ ಅರ್ಜಿಯು ಮುಖ್ಯ ನ್ಯಾ. ಎ.ಎಸ್.ಓಕ್ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಈ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಳಿಕಾ ದುರ್ಗಾಪರಮೇಶ್ವರಿ ದೇವಸ್ಥಾನವು ಖಾಸಗಿ ದೇವಾಲಯವಾಗಿದೆ. ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಆನೆಯೊಂದನ್ನು ತಂದು ಪೋಷಿಸಲಾಗಿತ್ತು. ಇದೀಗ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದ ಕಾರಣ ಆನೆಯೂ ಸರ್ಕಾರದ ವಶದಲ್ಲಿದೆ. ಅದನ್ನು ಸ್ಥಳಾಂತರಿಸದೇ ದೇವಸ್ಥಾನದಲ್ಲಿಯೇ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದರು.
ಕೇವಲ ಪೂಜಾ ಕಾರ್ಯಕ್ರಮ ನೆರವೇರಿಸಲು ಅದನ್ನು ಬಳಕೆ ಮಾಡಲಾಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ಸಮರ್ಥನೆ ನೀಡಿದ್ದು ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಆನೆಗಳು ಕಾಡಿನಲ್ಲಿರಬೇಕೇ ಹೊರತು ದೇಗುಲಗಳಲ್ಲಲ್ಲ. ಆನೆಯನ್ನು ದೇವಸ್ಥಾನದಲ್ಲಿರಿಸಿ ಪೂಜಾ ಕಾರ್ಯಕ್ರಮಕ್ಕೆ ಬಳಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದು ಅದಕ್ಕೆ ವಕೀಲರು ಈ ಪದ್ಧತಿ ಹಿಂದಿನಿಂದಲೂ ಜಾರಿಯಲ್ಲಿದೆ ಎಂದರು. ಇದಕ್ಕೆ ಆಕ್ಷೇಪಿಸಿದ ಪೀಠ, ಹಿಂದಿನ ಕಾಲದಲ್ಲಿ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಜಾರಿಯಲ್ಲಿರಲಿಲ್ಲ. ಇದೀಗ ಆ ಕಾಯ್ದೆ ಜಾರಿಯಲ್ಲಿದೆ. ಹಳೆ ಪದ್ಧತಿ ಎಂದು ಅದನ್ನು ಈಗಲೂ ಮುಂದುವರಿಸುವುದನ್ನು ಒಪ್ಪಲಾಗದು ಎಂದು ಪೀಠ ಹೇಳಿದೆ.
ಸರ್ಕಾರಿ ವಕೀಲ ವಿಜಯ್ ಕುಮಾರ್ ಪಾಟೀಲ್, ಆನೆಗೆ ಆರೋಗ್ಯ ಸಮಸ್ಯೆಯಿದೆ. ಚಿಕಿತ್ಸೆ ನೀಡುವ ಅಗತ್ಯ ಇರುವುದರಿಂದ ಅದನ್ನು ಮಾಲೂರಿನ ಅರಣ್ಯ ಇಲಾಖೆಯ ಪುನರ್ವಸತಿ ಕೇಂದ್ರಕ್ಕೆ ರವಾನಿಸಿ ಅಗತ್ಯ ಚಿಕಿತ್ಸೆ ನೀಡಲಾಗುವುದು ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ, ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ 2 ವಾರ ಕಾಲಾವಕಾಶ ನೀಡಿತು. ಅಲ್ಲದೆ ಆನೆಗೆ ಸೂಕ್ತ ಚಿಕಿತ್ಸೆ ಕಲ್ಪಿಸಿ, ವೈದ್ಯಕೀಯ ವರದಿ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ಸೆ.13ಕ್ಕೆ ವಿಚಾರಣೆ ಮುಂದೂಡಿತು.
Comments are closed.