ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿ 18 ದಿನಗಳು ಕಳೆದರೂ ಖಾತೆ ಬದಲಾವಣೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಸಚಿವ ಆನಂದ್ ಸಿಂಗ್ ಅವರು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದು ಸಿಎಂ ಭೇಟಿಯ ಬಳಿಕ ಆನಂದ್ ಸಿಂಗ್ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಸಚಿವರಾಗಿ ಖಾತೆ ಜವಾಬ್ದಾರಿ ನಿರ್ವಹಿಸುವುದಾಗಿ ಆನಂದ್ ಸಿಂಗ್ ಹೇಳಿದ್ದಾರೆ.
ಇಂದು ಬೆಳಿಗ್ಗೆ ಬಿಜೆಪಿ ಕಚೇರಿಯಲ್ಲಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನೂ ಆನಂದ್ ಸಿಂಗ್ ಭೇಟಿ ಮಾಡಿದ್ದಾರೆ.
ಸಿಎಂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ್ ಸಿಂಗ್, ಮೊದಲು ಖಾತೆಯನ್ನು ನಿರ್ವಹಿಸಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಅವರ ಆದೇಶದಂತೆ ಖಾತೆಯನ್ನು ಇಂದು ವಹಿಸಿಕೊಳ್ಳುತ್ತೇನೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದಿದ್ದಾರೆ.
ಇನ್ನು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತನಗೆ ನೀಡಲಾಗಿರುವ ಪರಿಸರ ಮತ್ತು ಪ್ರವಾಸೋದ್ಯಮ ಖಾತೆಯನ್ನು ಬದಲಿಸಬೇಕು ಎಂದು ಆನಂದ್ ಸಿಂಗ್ ಒತ್ತಾಯಿಸಿದ್ದಲ್ಲದೆ ರಾಜೀನಾಮೆ ನೀಡುವ ಹೇಳಿಕೆಯನ್ನೂ ನೀಡಿದ್ದರು. ನಂತರ ಬೊಮ್ಮಾಯಿ- ಬಿಎಸ್ ವೈ ಜೊತೆ ಮಾತುಕತೆ ನಡೆಸಿ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
Comments are closed.