ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ಸಂಜೆ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ತಮಿಳುನಾಡಿನ ಸತ್ಯಮಂಗಲದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು.
ಆರೋಪಿಗಳಲ್ಲಿ ಐವರು ತಮಿಳುನಾಡು ಮೂಲದವರು ಎನ್ನಲಾಗಿದೆ. ಆರೋಪಿಗಳು ಮೈಸೂರು ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ತಮಿಳುನಾಡಿನಿಂದ ಬಾಳೆಕಾಯಿ ಮಂಡಿ ತರುವ ಕಾಯಕ ಇವರದ್ದಾಗಿತ್ತು. ಮೊದಲಿಗೆ ಐವರು ವಿದ್ಯಾರ್ಥಿಗಳು ಎನ್ನಲಾಗಿತ್ತಾದರೂ ಹೆಚ್ಚಿನ ತನಿಖೆ ಬಳಿಕ ಅವರು ಕೂಲಿಯಾಳುಗಳು ಎಂದು ತಿಳಿದುಬಂದಿದೆ.
ಕೃತ್ಯ ನಡೆದ ಸ್ಥಳದಲ್ಲಿ ಈ ಆರೋಪಿಗಳು ನಿರಂತರವಾಗಿ ಓಡಾಡುತ್ತಿದ್ದರು. ಇತ್ತ ಯುವಕ ಹಾಗೂ ಯುವತಿ ಮೂರು ದಿನ ಅದೇ ಸ್ಥಳದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ಗಮನಿಸಿದ್ದ ತಂಡ ನಾಲ್ಕನೇ ದಿನ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸದ್ಯ ಸತ್ಯಮಂಗಲ ಕಾಡಿನಲ್ಲಿ ಸೆರೆ ಹಿಡಿದಿರುವ ಆರೋಪಿಗಳನ್ನು ಪೊಲಿಸರು ಮೈಸೂರಿಗೆ ಕರೆತಂದಿದ್ದಾರೆ. ಅಜ್ಞಾತ ಸ್ಥಳವೊಂದರಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪೋಷಕರೊಂದಿಗೆ ಮುಂಬೈಗೆ ಮರಳಿದ್ದಾರೆ. ಪ್ರಕರಣದ ಸಂಬಂಧ ಯಾವುದೇ ಹೇಳಿಕೆ ಕೊಟ್ಟಿಲ್ಲ. ಆರೋಪಿಗಳ ಫೋಟೋವನ್ನು ಪೊಲೀಸರು ವಾಟ್ಸಪ್ ನಲ್ಲಿ ಕಳುಹಿಸಿ ಗುರುತಿಸಲು ಹೇಳಿದ್ದಾರೆ. ಆಕೆಯ ಸ್ನೇಹಿತನಿಗೂ ಫೋಟೋ ತೋರಿಸಿರುವ ಪೊಲೀಸರು ಆರೋಪಿಗಳ ಬಗ್ಗೆ ಖಾತ್ರಿ ಮಾಡಿಕೊಂಡಿದ್ದಾರೆ.
ಪ್ರವೀಣ್ ಸೂದ್ ಸುದ್ದಿಗೋಷ್ಠಿ: ಪ್ರಕರಣ ಸಂಬಂಧ ಶನಿವಾರ ಮಧ್ಯಾಹ್ನ12. 30 ಕ್ಕೆ ಡಿಜಿಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಐವರು ಆರೋಪಿಗಳ ಬಂಧನದ ಬಗ್ಗೆ ಪ್ರವೀಣ್ ಸೂದ್ ಅವರು ಮಾಹಿತಿ ನೀಡಲಿದ್ದಾರೆ.
Comments are closed.