ಕರಾವಳಿ

ಅನಾರೋಗ್ಯ ಪೀಡಿತರಿಗೆ ದೇಣಿಗೆ ನೀಡಲು ಅಷ್ಟಮಿಗೆ ‘ಡಾರ್ಕ್ ಅಲೈಟ್’ ವೇಷ ಹಾಕಲಿದ್ದಾರೆ ರವಿ ಕಟಪಾಡಿ

Pinterest LinkedIn Tumblr

ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಫ್ರೆಂಡ್ಸ್ ಕಟಪಾಡಿ ಸಹಕಾರದೊಂದಿಗೆ ಆ. 30 ಮತ್ತು 31 ರಂದು ವಿಭಿನ್ನ ಶೈಲಿಯ ವೇಷ ಹಾಕಿ ಅದರಿಂದ ಬಂದ ಲಕ್ಷಾಂತರ ರೂಪಾಯಿ ಹಣವನ್ನು ಅನಾರೋಗ್ಯ ಪೀಡಿತರಿಗೆ ದೇಣಿಗೆ ನೀಡಿ ಹೆಸರುವಾಸಿಯಾಗಿರುವ ಕಟಪಾಡಿ ಜೆ.ಎನ್.ನಗರ ಕಾಲೊನಿಯ ಯುವಕ ಸೆಂಟ್ರಿಂಗ್ ರವಿ ಈ ಬಾರಿ ಹಾಲಿವುಡ್ ಸಿನಿಮಾದ ಡಾರ್ಕ್ ಅಲೈಟ್ ವೇಷದಲ್ಲಿ ಬೀದಿಗಿಳಿದು ದೇಣಿಗೆ ಸಂಗ್ರಹಕ್ಕೆ ಹೊರಟಿದ್ದಾರೆ.

ಕಳೆದ ಆರು ವರ್ಷಗಳಿಂದ ಸುಮಾರು ರೂ 72 ಲಕ್ಷ ಸಾಮಾಜಿಕ ಸೇವೆಗೆ ನೆರವು ನೀಡಿ ಗಮನ ಸೆಳೆದಿ ರುವ ರವಿ ಮತ್ತು ಅವರ ಗೆಳೆಯರು, ಈ ಬಾರಿ ನಾಲ್ವರು ಮಕ್ಕಳ ವೈದ್ಯಕೀಯ ಚಿಕಿತ್ಸೆಗಾಗಿ ವೇಷ ಹಾಕಿಯೇ ಹಣ ಸಂಗ್ರಹಿಸಲು ಮುಂದಾಗಿದ್ದಾರೆ.
ಬಡವರ ಮತ್ತು ಅಂಗವೈಕಲ್ಯದಿಂದ ಬಳಲುತ್ತಿರುವ ಬಡಮಕ್ಕಳ ಬಾಳಿಗೆ ಆಶಾಕಿರಣವಾಗಿ ಮೂಡಿಬಂದಿರುವ ಕಟಪಾಡಿಯ ರವಿ ಮತ್ತು ರವಿ ಫ್ರೆಂಡ್ಸ್ ಬಳಗದವರು ಕಾರ್ಯಪ್ರವೃತ್ತರಾಗಿದ್ದಾರೆ. ತಮಗೆ ಬಡತನವಿದ್ದರೂ ಇತರರ ನೋವಿಗೆ ಸ್ಪಂದಿಸುವ ಹೃದಯ ವಿಶಾಲತೆ ಯನ್ನು ಹೊಂದಿರುವ ಈ ತಂಡ, ಅನಾರೋಗ್ಯದಿಂದ ಬಳಲುತ್ತಿರುವ ನಾಲ್ಕು ಬಡಮಕ್ಕಳ ಜೀವರಕ್ಷಣೆಗೆ ಮುಂದಾಗಿರುವುದಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಳೆದ ಬಾರಿ ಧನಸಹಾಯ ಮಾಡಲು ಆಗಿರಲಿಲ್ಲ. ಮನಸ್ಸಿಗೆ ಬಹಳ ಬೇಸರವಾಗಿತ್ತು. ಈ ಬಾರಿ ಮತ್ತೆ ಶ್ರೀಕೃಷ್ಣಜನ್ಮಾಷ್ಟಮಿ ಬಂದಿದೆ. ನಾಲ್ಕು ಮಕ್ಕಳಿಗೆ ಸಹಾಯ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು. ಆ ನಂತರ ಎರಡು ಕುಟುಂಬಗಳು ನಮ್ಮನ್ನು ಸಂಪರ್ಕ ಮಾಡಿದವು. ಅವರಿಗೂ ಸಹಾಯ ಮಾಡುತ್ತೇವೆ. ಕೊರೊನಾ ಕಾಲದಲ್ಲೂ ನಮಗೆ ಅವಕಾಶ ಕೊಟ್ಟ ಜಿಲ್ಲಾಡಳಿತಕ್ಕೆ ಧನ್ಯವಾದ. ಆಗಸ್ಟ್ 30 ಮತ್ತು 31 ರಂದು ಉಡುಪಿ, ಕಾಪು-ಮಲ್ಪೆ ವ್ಯಾಪ್ತಿಯಲ್ಲಿ ಓಡಾಡಿ ಧನಸಂಗ್ರಹ ಮಾಡಲಿದ್ದಾರೆ. ಸಂಗ್ರಹವಾಗುವ ಒಂದೊಂದು ರೂಪಾಯಿ ಕಷ್ಟದಲ್ಲಿರುವ ಕುಟುಂಬಗಳ ಪಾಲಾಗಲಿದೆ. ಜನರ ಬಳಿಗೆ ಬಂದಾಗ ನಿಮ್ಮ ಕೈಲಾದ ಸಹಾಯ ಮಾಡಿ ಎಂದು ರವಿ ವಿನಂತಿ ಮಾಡಿಕೊಂಡರು.

Comments are closed.