ಮಂಗಳೂರು, ಆಗಸ್ಟ್.30: ಕಲ್ಕೂರ ಪ್ರತಿಷ್ಠಾನವು ONLINE ಮೂಲಕ ಆಯೋಜಿಸಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಕೃಷ್ಣ ವೇಷ ಸ್ಪರ್ಧೆಯ ಉದ್ಘಾಟನಾ ಸಮಾರಂಭವು ಸರಕಾರದ ಕೊರೋನಾ ನಿಯಮಾವಳಿಯಂತೆ ಸೋಮವಾರ ಬೆಳಿಗ್ಗೆ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.
ಕಟೀಲು ದೇವಳದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಶರವು ದೇವಳದ ಶಿಲೆ ಶಿಲೆ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರೀಯವರು, ಕದ್ರಿ ವಿಠಲದಾಸ ತಂತ್ರಿಯವರು ದೀಪ ಬೆಳಗುವ ಮೂಲಕ ಸ್ಪರ್ಧೆಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಮಾತನಾಡಿ, ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಕಳೆದ ಮೂರುವರೆದಶಕಗಳಿಂದ ಕಲ್ಕೂರ ಪ್ರತಿಷ್ಠಾನವು ನಡೆಸಿಕೊಂಡು ಬಂದಿರುವ ರಾಷ್ಟ್ರೀಯ ಮಕ್ಕಳ ಉತ್ಸವ-“ಶ್ರೀ ಕೃಷ್ಣ ವೇಷ ಸ್ಪರ್ಧೆ”ಯು ನಿಜಕ್ಕೂ ಶ್ಲಾಘನೀಯವಾದುದು ಎಂದು ನುಡಿದರು.
ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಈ ಸಂದರ್ಭ ಹರಿಕೃಷ್ಣ ಪುನರೂರು, ಪ್ರೊ. ಎಂ. ಬಿ. ಪುರಾಣಿಕ್, ರತ್ನಾಕರ ಜೈನ್, ಭುವನಾಭಿರಾಮ ಉಡುಪ, ಉದ್ಯಮಿ ಪ್ರಶಾಂತ್ ಶೇಟ್, ದಯಾನಂದ ಕಟೀಲು, ಲೀಲಾಕ್ಷ ಕರ್ಕೇರ, ನವನೀತ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
36 ವಿಭಾಗಗಳಲ್ಲಿ ಸ್ಪರ್ಧೆ: ವಿವಿಧ ಸ್ಥಳೀಯ ಚಾನೆಲ್ ಗಳಲ್ಲಿ ನೇರ ಪ್ರಸಾರ
ಒಟ್ಟು 36 ವಿಭಾಗಗಳಲ್ಲಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು ಈ ಎಲ್ಲಾ ಕಾರ್ಯಕ್ರಮಗಳು ಬೆಳಗ್ಗೆ 9ರಿಂದ ರಾತ್ರಿ 12ರ ತನಕ ವಿವಿಹ ಚಾನೆಲ್ ಹಾಗೂ ಇನ್ನೀತರ ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಲಿದೆ.
ಬೆಳಗ್ಗೆ 9 ರಿಂದ ಅಪರಾಹ್ನ 12.30ರವರೆಗೆ ಶ್ರೀ ಕೃಷ್ಣ ವರ್ಣ ವೈಭವ, ಶ್ರೀ ಕೃಷ್ಣ ಗಾನ ವೈಭವ, ರಂಗೋಲಿಯಲ್ಲಿ ಶ್ರೀ ಕೃಷ್ಣ, ಛಾಯ ಕೃಷ್ಣ, ಶಂಖ ನಾದ, ಶಂಖ ಉದ್ಘೋಷ, ಗೀತಾ ಕೃಷ್ಣ ನಂತರ ಮಧ್ಯಾಹ್ನ 12.30ರಿಂದ ತೊಟ್ಟಿಲ ಕೃಷ್ಣ, ವೃಕ್ಷ ಕೃಷ್ಣ, ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ರಾಧಾ ಕೃಷ್ಣ, ರಾಧಾ ಮಾಧವ, ದೇವಕಿ ಕೃಷ್ಣ, ಯಶೋಧ ಕೃಷ್ಣ, ಯಕ್ಷ ಕೃಷ್ಣ, ವಸುದೇವ ಕೃಷ್ಣ, ನಂದಗೋಕುಲ, ಸಂಜೆ 6ರಿಂದ 7 ರವರೆಗೆ ಅಚ್ಯುತ ಮತ್ತು ಮಾಧವ ರಸಪ್ರಶ್ನೆ ನೇರಪ್ರಸಾರದಲ್ಲಿ ನೆರವೇರಿತು.
ಈ ಬಾರಿಯ ಸ್ಪರ್ಧೆಯಲ್ಲಿ ಅಮೇರಿಕಾ, ಆಸ್ಟ್ರೇಲಿಯಾ, ಬೆಹರಿನ್, ದುಬೈ, ಕೆನಡಾ, ಸಿಂಗಾಪುರ ಹೀಗೆ ಹಲವಾರು ದೇಶಗಳಿಂದ ಮಾತ್ರವಲ್ಲದೆ ಭಾರತದಾದ್ಯಂತ ರಾಜ್ಯಸ್ಥಾನ, ದೆಹಲಿ, ಚೆನ್ನೈ ಆಂದ್ರಪ್ರದೇಶ, ತೆಲಂಗಾಣ, ಕೇರಳ, ಮುಂಬಯಿ ಅಲ್ಲದೆ ಕರ್ನಾಟಕದಾದ್ಯಂತದಿಂದ ಸಾವಿರಾರು ಸಂಖ್ಯೆಯಲ್ಲಿ ಸ್ಪರ್ಧಾಳುಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಯುವಕ ಯುವತಿಯರ ಕಂಪ್ಯೂಟರ್ ತಾಂತ್ರಿಕ ತಂಡವೊಂದು ದಯಾನಂದ ಕಟೀಲ್ ರವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸುಮಾರು 150ಕ್ಕೂ ಅಧಿಕ ತೀರ್ಪುಗಾರರ ತಂಡವು ಆಯ್ಕೆ ಪ್ರಕ್ರಿಯೆಯಲ್ಲಿ ಸಹಕರಿಸಲಿರುವುದು.
ರಾತ್ರಿ 9.30ಕ್ಕೆ ಸಮಾರೋಪ ಸಮಾರಂಭ ಹಾಗೂ ONLINE ಕೃಷ್ಣ ವೇಷ ಸ್ಪರ್ಧೆಯ ವಿಜೇತರನ್ನು ಘೋಷಣೆ ಮಾಡಲಾಗುವುದು. ನೇರಪ್ರಸಾರದಲ್ಲಿ ರಾತ್ರಿ 12.17ಕ್ಕೆ ಕದ್ರಿ ಕ್ಷೇತ್ರದ ಅರ್ಚಕ ವೇದಮೂರ್ತಿ ಡಾ. ಪ್ರಭಾಕರ ಅಡಿಗರ ಮಾರ್ಗದರ್ಶನದಲ್ಲಿ ಶ್ರೀಕೃಷ್ಣ ದೇವರಿಗೆ ಅರ್ಘ್ಯ ಪ್ರದಾನ ನಡೆಯಲಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
Comments are closed.