ಉಡುಪಿ: ಯುವಕನಿಂದ ಚಾಕು ಇರಿತಕ್ಕೊಳಗಾಗಿ ಗಂಭೀರ ಗಾಯವಾಗಿ ರಕ್ತ ಸ್ರಾವಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಂಬಾಗಿಲು ಸಮೀಪದ ಕಕ್ಕುಂಜೆ ನಿವಾಸಿ ವಿಠಲ ಭಂಡಾರಿ ಹಾಗೂ ಸುಶೀಲಾ ದಂಪತಿಯ ಪುತ್ರಿ ಸೌಮ್ಯಶ್ರೀ(26) ಕೊಲೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸೌಮ್ಯಶ್ರೀ ಸಂತೆಕಟ್ಟೆಯ ರಾಷ್ಟ್ರೀಕೃತ ಬ್ಯಾಂಕಿನ ಆಧಾರ್ ಕಾರ್ಡ್ ಲಿಂಕ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಸಂದೇಶ್ ಕುಲಾಲ್ ಉಡುಪಿಯ ಐಡಿಯಲ್ ಮೆಡಿಕಲ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ.
ಇವರಿಬ್ಬರು ಕಳೆದ ಏಳೆಂಟು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಸೌಮಶ್ರೀಯ ಸಹೋದರರಿಬ್ಬರು ವಿದೇಶದಲ್ಲಿದ್ದು, ತಂದೆ ಅನಾರೋಗ್ಯ ಪೀಡಿತರಾಗಿದ್ದಾರೆ. ಮೃತ ಸೌಮ್ಯಶ್ರೀಗೆ ವಾರದ ಹಿಂದೆ ನಿಶ್ಚಿತಾರ್ಥ ಆಗಿತ್ತು. ಇದರಿಂದ ಗೆಳೆಯ ಸಂದೇಶ ಕುಲಾಲ್ ಸಿಟ್ಟುಗೊಂಡಿದ್ದು ಇಬ್ಬರಿಗೂ ಜಗಳ ಆಗಿದೆ. ಬ್ಯಾಂಕಿನಿಂದ ಆಕೆ ಮನೆಗೆ ವಾಪಾಸ್ ಆಗುತ್ತಿದ್ದ ಸಂದರ್ಭ ಸಂದೇಶ್ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಬಳಿ ಅಡ್ಡಗಟ್ಟಿ ನಿಂತಿದ್ದಾನೆ. ಯುವತಿಯ ಜೊತೆ ವಾಗ್ವಾದ ನಡೆದಿತ್ತು ಎನ್ನಲಾಗಿದೆ
ಜಗಳ ಮುಂದುವರೆದು ಯುವಕ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ದ್ವಿಚಕ್ರ ವಾಹನದಿಂದ ಯುವತಿ ಕೆಳಗೆ ಬಿದ್ದಿದ್ದಾಳೆ. ಸಂದೇಶ್ ಕೂಡ ನಂತರ ಅದೇ ಚಾಕುವಿನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ. ಸ್ಥಳೀಯರು ಘಟನೆಯನ್ನು ತಪ್ಪಿಸಲು ಯತ್ನಿಸಿದ್ದು ಗಂಭೀರ ಗಾಯಗೊಂಡ ಇಬ್ಬರೂ ಕುಸಿದು ಬಿದ್ದಿದ್ದಾರೆ.
ಗಂಭೀರ ಗಾಯಗೊಂಡ ಯುವತಿ ಹಾಗೂ ಯುವಕ ಸಂದೇಶ್ ಕುಲಾಲ್ ನನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಯುವತಿ ಅತೀವ ರಕ್ತಸ್ರಾವದಿಂದ ಮೃತಪಟ್ಟಿದ್ದು ಯುವಕ ಸಂದೇಶ್ ಕುಲಾಲ್ ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.
ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.