ಕರ್ನಾಟಕ

ಕನ್ನಡ ಚಿತ್ರರಂಗದ ‘ಎವರ್‌ಗ್ರೀನ್‌’ ಹೀರೋ ಅನಂತ್‌ ನಾಗ್‌ ಅವರಿಗೆ ಬರ್ತ್‌ಡೇ ಸಂಭ್ರಮ

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್‌ನಾಗ್‌ ಅವರಿಗೆ ಇಂದು 74ನೇ ಹುಟ್ಟುಹಬ್ಬದ ಸಂಭ್ರಮ. ತಮ್ಮ ಅಮೋಘ ಅಭಿನಯದ ಮೂಲಕ ದೊಡ್ಡ ಅಭಿಮಾನಿ ವರ್ಗವನ್ನೇ ಹೊಂದಿರುವ ಅನಂತ್‌ ನಾಗ್‌ ಸ್ಯಾಂಡಲ್ ವುಡ್ ಎವರ್ ಗ್ರೀನ್ ಹೀರೊ ಎಂದು ಅಭಿಮಾನಿಗಳ ಪ್ರೀತಿಗೆ ಪಾತ್ರವಾಗಿದ್ದಾರೆ. ಸದ್ಯ ಸಿನೆಮಾ ಚಿತ್ರೀಕರಣ ನಿಮಿತ್ತ ಉಡುಪಿಯಲ್ಲಿ ಅನಂತ್ ನಾಗ್ ವಾಸ್ತವ್ಯವಿದ್ದಾರೆ.

1948ರ ಸೆಪ್ಟೆಂಬರ್ 4ರಂದು ಭಟ್ಕಳ ತಾಲೂಕಿನ ಶಿರಾಲಿಯ ನಾಗರಕಟ್ಟೆಯಲ್ಲಿ ಅನಂತ್ ನಾಗ್ ಜನಿಸಿದರು. ಇಂದು 74ನೇ ವಸಂತಕ್ಕೆ ಕಾಲಿಡುತ್ತಿರುವ ಅವರಿಗೆ ಕನ್ನಡ ಚಿತ್ರರಂಗದವರು ಶುಭಾಶಯಗಳನ್ನು ಕೋರಿದ್ದಾರೆ.

ಚಿತ್ರರಂಗದ ಹಿನ್ನೆಲೆ…
1973ರಲ್ಲಿ ಅನಂತ್​ನಾಗ್ ‘ಸಂಕಲ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 1975ರಲ್ಲಿ ಜಿ.ವಿ.ಅಯ್ಯರ್ ಅವರ ‘ಹಂಸಗೀತೆ’ಯಲ್ಲಿ ಮುಖ್ಯಪಾತ್ರ ನಿರ್ವಹಿಸಿದ್ದು ಆ ಚಿತ್ರ ರಾಷ್ಟ್ರ ಪ್ರಶಸ್ತಿಗೆ ಭಾಜನವಾಯಿತು. ಅನಂತ್ ನಾಗ್ ಸಹೋದರ ಶಂಕರ್​ನಾಗ್ ನಿರ್ದೇಶನದ ‘ಮಾಲ್ಗುಡಿ ಡೇಸ್’ ಧಾರವಾಹಿಯಲ್ಲಿ ಇವರ ಪಾತ್ರ ಅಮೋಘವಾಗಿತ್ತು. ಸುದೀರ್ಘ 48 ವರ್ಷಗಳ ಸಿನಿ ಪಯಣದಲ್ಲಿ ಅನಂತ್​ನಾಗ್ ಸುಮಾರು 300ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದು, ಅದರಲ್ಲಿ ಕನ್ನಡದ ಸುಮಾರು 200ಕ್ಕೂ ಅಧಿಕ ಚಿತ್ರಗಳು ಸೇರಿವೆ. ಇವುಗಳಲ್ಲದೇ ಹಿಂದಿ, ಮರಾಠಿ, ಮಲಯಾಳಂ, ತಮಿಳು, ತೆಲುಗು ಮೊದಲಾದ ಭಾಷೆಯ ಚಿತ್ರಗಳಲ್ಲಿ ಅನಂತ್​ನಾಗ್ ಬಣ್ಣ ಹಚ್ಚಿದ್ದಾರೆ.

ತುಳು‌ ಸಿನೆಮಾದಲ್ಲೂ ನಟನೆ…
ನಾಯಕ ನಟನಾಗಿ, ಪೋಷಕ ನಟನಾಗಿ ಮಾತ್ರವಲ್ಲದೆ ಹಾಸ್ಯ, ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆಯುತ್ತಿರುವ ಅನಂತ್‌ನಾಗ್‌ ಅವರು ಕೆಲ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಖ್ಯಾತ ಉದ್ಯಮಿ ಹಾಗೂ ನಿರ್ಮಾಪಕ ಹರೀಶ್ ಶೇರಿಗಾರ್, ಶರ್ಮಿಳಾ ಹರೀಶ್ ಶೇರಿಗಾರ್ ದಂಪತಿಗಳ ‘ಆಕ್ಮೇ ಮೂವೀಸ್ ಇಂಟರ್ನ್ಯಾಷನಲ್’ ನಿರ್ಮಾಣದ ‘ಇಂಗ್ಲೀಷ್’ ತುಳು ಸಿನೆಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಈ ಮೂಲಕ ಹಿರಿಯ ಮೇರು ನಟರೊಬ್ಬರು ತುಳು‌ ಚಿತ್ರದಲ್ಲಿ ನಟಿಸಿ‌ದ ಕೀರ್ತಿ‌ ಇವರದ್ದಾಗಿತ್ತು. ಆಕ್ಮೇ ನಿರ್ಮಾಣದ ಮಾರ್ಚ್22 ಚಿತ್ರದಲ್ಲೂ‌ ಕೂಡ ಅನಂತ್ ನಾಗ್ ನಟಿಸಿದ್ದರು.

ಮುಂದಿನ ಚಿತ್ರಗಳು..
ಬಹುನಿರೀಕ್ಷಿತ ಸಿನೆಮಾಗಳಲ್ಲಿ ಪ್ರಮುಖವಾಗಿರುವ ‘ದೃಶ್ಯ-2’ ಚಿತ್ರೀಕರಣದಲ್ಲಿ ಭಾಗವಹಿಸಿರುವ ಅನಂತ್‌ ನಾಗ್‌ ಅವರ ‘ಮೇಡ್‌ ಇನ್‌ ಬೆಂಗಳೂರು’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಯೋಗರಾಜ್‌ ಭಟ್‌ ನಿರ್ದೇಶನದ ‘ಗಾಳಿಪಟ-2’ ಚಿತ್ರದಲ್ಲೂ ಇವರು ನಟಿಸಿದ್ದಾರೆ. ವಿ.ಆರ್.ಎಲ್. ಪ್ರೊಡಕ್ಷನ್ಸ್ ಅವರ ‘ವಿಜಯಾನಂದ’, ರಕ್ಷಿತ್‌ ಶೆಟ್ಟಿ ಪರಂವಾ ಸ್ಟುಡಿಯೋ ನಿರ್ಮಾಣದಲ್ಲಿ ತಯಾರಾಗುತ್ತಿರುವ ‘ಆಬ್ರಕಡಾಬ್ರ’ ಚಿತ್ರದಲ್ಲೂ ಅನಂತ್‌ನಾಗ್‌ ಪ್ರಮುಖ ಪಾತ್ರ ಮಾಡುತ್ತಿದ್ದಾರೆ

ಅನಂತ್ ನಾಗ್ 1987ರಲ್ಲಿ ಗಾಯತ್ರಿ ಅವರನ್ನು ವಿವಾಹವಾದರು. ದಂಪತಿಗೆ ಅದಿತಿ ಎಂಬ ಪುತ್ರಿಯಿದ್ದಾರೆ. 2007 ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅನಂತ್ ನಾಗ್ ಅವರ ಮಿಂಚಿನ ಓಟ, ಅವಸ್ಥೆ, ಹೊಸ ನೀರು, ಗಂಗವ್ವ ಗಂಗಾಮಾಯಿ, ನಾ ನಿನ್ನ ಬಿಡಲಾರೆ, ಬರ, ಹೆಂಡ್ತಿಗೆ ಹೇಳಬೇಡಿ, ಉದ್ಭವ, ಗೌರಿ ಗಣೇಶ, ಗೋದಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಗಳ ಅಭಿನಯಕ್ಕೆ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿ ಲಭ್ಯವಾಗಿದೆ. ಡಾ.ವಿಷ್ಣುವರ್ಧನ್ ಜೀವಮಾನ ಸಾಧನೆ ಪ್ರಶಸ್ತಿ ಸಹಿತ ಹಲವಾರು ಫಿಲ್ಮ್​ಫೇರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ನನ್ನ ತಮ್ಮ ಶಂಕರ’ ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಪಡೆದಿದ್ದಾರೆ.

ರಾಜಕೀಯದಲ್ಲೂ ಸಕ್ರಿಯರಾಗಿದ್ದ ಅನಂತ್ ನಾಗ್, ಶಾಸಕರಾಗಿ ಸಚಿವರೂ ಆಗಿದ್ದವರು. ಅನಂತ್‌ನಾಗ್‌ ಅವರಿಗೆ ಪದ್ಮ ಪ್ರಶಸ್ತಿ ನೀಡಬೇಕೆಂಬ ಅಭಿಯಾನಕ್ಕೆ ಸ್ಟಾರ್‌ ನಟರು ಕೈ ಜೋಡಿಸಿದ್ದಾರೆ. ಅಭಿಮಾನಿಗಳ ಸದಾಶಯವೂ ಕೂಡ ಇದೇ ಆಗಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.