ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆ ಅಭಿಮನ್ಯು ನೇತೃತ್ವದ ಗಜಪಡೆಗೆ ಅರಮನೆಗೆ ಪ್ರವೇಶ ಪಡೆಯುವುದರೊಂದಿಗೆ ಈ ಬಾರಿಯ ದಸರಾಕ್ಕೆ ಕಳೆ ಬಂದಿದೆ.
ಅರಣ್ಯ ಭವನದಿಂದ ಆಗಮಿಸಿದ ಗಜಪಡೆಗೆ ಅಂಬಾವಿಲಾಸ ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಜಿಲ್ಲಾಡಳಿತದ ಪರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೇತೃತ್ವದಲ್ಲಿ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ಪುಷ್ಪಾರ್ಚನೆ ಮಾಡಿ, ಅರಮನೆ ಬ್ಯಾಂಡ್, ಮಂಗಳ ವಾದ್ಯ, ಪೂರ್ಣಕುಂಭ ಸ್ವಾಗತದ ಮೂಲಕ ಅರಮನೆ ಆವರಣಕ್ಕೆ ಸ್ವಾಗತಿಸಲಾಯಿತು.
ಇದೇ ವೇಳೆ ಗಜಪಡೆಗೆ ಕಬ್ಬು,ಬೆಲ್ಲ, ತೆಂಗಿನ ಕಾಯಿ ತಿನ್ನಿಸಿ, ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಂಸದ ಪ್ರತಾಪ್ ಸಿಂಹ, ಮೇಯರ್ ಸುನಂದಾ ಪಾಲನೇತ್ರ ಮೊದಲಾದವರಿದ್ದು ಶುಭ ಹಾರೈಸಿದರು.
ಪ್ರಥಮ ಬಾರಿಗೆ ದಸರಾ ಗಜಪಡೆಗೆ ಅಶ್ವತ್ಥಾಮ ಎಂಬ ಹೊಸ ಆನೆ ಸೇರ್ಪಡೆಯಾಗಿದ್ದು, ಬ್ಯಾಂಡ್, ಮಂಗಳವಾದ್ಯ ಎಲ್ಲವೂ ಇದಕ್ಕೆ ಹೊಸತಾಗಿರುವ ಕಾರಣ ಶಬ್ದಕ್ಕೆ ಬೆಚ್ಚಿ ಬಿದ್ದ ಘಟನೆ ನಡೆದಿದೆ. ಭವಿಷ್ಯದಲ್ಲಿ ಇದು ಅಂಬಾರಿ ಹೊರುವ ಆನೆಯಾಗಿ ಗಜಪಡೆಯ ನೇತೃತ್ವ ವಹಿಸಲಿರುವುದರಿಂದ ಇದಕ್ಕೆ ಈ ಬಾರಿಯಿಂದ ತಾಲೀಮು ನೀಡಲಾಗುತ್ತಿದೆ. ತಾಲೀಮು ಈ ಬಾರಿ ಅರಮನೆ ಆವರಣದಲ್ಲಿಯೇ ನಡೆಯಲಿದೆ. ಇವುಗಳ ತೂಕ ಪರೀಕ್ಷೆ ನಡೆಸಿ ನಂತರ ತಾಲೀಮು ನಡೆಯಲಿದೆ. ಪ್ರತಿದಿನವೂ ನಡೆಯುವ ತಾಲೀಮು ಕ್ರಮೇಣ ಕಠಿಣವಾಗುತ್ತಾ ಹೋಗಲಿದೆ.
ಸಾಮಾನ್ಯವಾಗಿ ಗಜಪಡೆ ಅರಮನೆ ಆವರಣವನ್ನು ಪ್ರವೇಶಿಸಿತು ಎಂದ ಕೂಡಲೇ ದಸರಾ ಸಂಭ್ರಮ ಶುರುವಾದಂತೆಯೇ. ಅರಮನೆ ಆವರಣದಲ್ಲಿ ಸಾಕಾನೆಗಳಿಗೆ ಟೆಂಟ್ ಹಾಕಿ ಅವುಗಳನ್ನು ಜತನದಿಂದ ನೋಡಿಕೊಳ್ಳಲಾಗುತ್ತದೆ. ಪ್ರತಿ ನಿತ್ಯ ಅವುಗಳಿಗೆ ಸ್ನಾನ ಮಾಡಿಸಿ ಪೌಷ್ಠಿಕ ಆಹಾರವನ್ನು ನೀಡುತ್ತಾ ಬೆಳಿಗ್ಗೆ ಮತ್ತು ಸಂಜೆ ಜಂಬೂ ಸವಾರಿಗೆ ತಾಲೀಮುಗಳ ಮೂಲಕ ಸಜ್ಜುಗೊಳಿಸಲಾಗುತ್ತದೆ.
ಅಭಿಮನ್ಯು ಅಂಬಾರಿ ಹೊರುತ್ತಿರುವುದರಿಂದ ಆತನನ್ನು ಅಂಬಾರಿ ಹೊರಲು ಸಜ್ಜುಗೊಳಿಸುವ ತಾಲೀಮು ಶೀಘ್ರವೇ ಆರಂಭವಾಗಲಿದೆ. ಆನೆಗಳ ಭಾರವನ್ನು ಅಳೆದ ನಂತರ ಅವುಗಳ ಶಕ್ತಿ ಮತ್ತು ಗಾತ್ರಕ್ಕೆ ಅನುಸಾರವಾಗಿ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಆಹಾರ ಕೊಡಲಾಗುತ್ತದೆ. ಬೆಳಿಗ್ಗೆ ತಾಲೀಮು ನಡೆಸುವ ಮುನ್ನ ಕುಸುರೆ ಎಂದು ಕರೆಯುವ ಹೆಸರು ಕಾಳು, ಹುರುಳಿ ಕಾಳು, ಗೋಧಿ, ಕುಸುಲಕ್ಕಿ ಇವೆಲ್ಲವನ್ನು ಬೇಯಿಸಿ ಉಂಡೆ ಮಾಡಿ ಕೊಡಲಾಗುತ್ತದೆ.
Comments are closed.