ಕರ್ನಾಟಕ

ಬೆಂಗಳೂರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ; ಆತ್ಮಹತ್ಯೆಯೋ, ಕೊಲೆಯೋ ಶಂಕೆ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಸಂಜಯನಗರ ಬಸ್​ ನಿಲ್ದಾಣದ​ ಬಳಿ ವಿದ್ಯಾರ್ಥಿಯೊಬ್ಬನ ಶವ ಪತ್ತೆಯಾಗಿದ್ದು, ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿದೆ.

(ಸಾಂದರ್ಭಿಕ ಚಿತ್ರ)

ಮೇಲ್ನೋಟಕ್ಕೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವುದಾಗಿ ಕಂಡು ಬಂದಿದೆ. ಇನ್ನು ಮೃತ ವಿದ್ಯಾರ್ಥಿ ಜೇಬಿನಲ್ಲಿ ಮೊಬೈಲ್​ ಪತ್ತೆಯಾಗಿದ್ದು, ಮೊಬೈಲ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೃತ ವಿದ್ಯಾರ್ಥಿಯನ್ನು ಉತ್ತರಾಖಂಡ್ ಮೂಲದ ರಾಹುಲ್ ಭಂಡಾರಿ ಎಂದು ಗುರುತಿಸಲಾಗಿದೆ.

ರಾಹುಲ್ ಕುಟುಂಬ ಕಳೆದ 20 ವರ್ಷಗಳಿಂದ ಬೆಂಗಳೂರಿನ ಆರ್.ಟಿ.ನಗರದಲ್ಲಿ ವಾಸವಾಗಿದ್ದು, ಮೃತ ರಾಹುಲ್ ಮಿಲಿಟರಿ ಶಾಲೆಯ ದ್ವಿತೀಯ ಪಿಯು ವಿದ್ಯಾರ್ಥಿಯಾಗಿದ್ದ. ರಾಹುಲ್ ಭಂಡಾರಿ ರಾತ್ರಿ ಊಟ ಮುಗಿಸಿ ಮನೆಯಲ್ಲೇ ಮಲಗಿದ್ದ. ತಂದೆ ತಾಯಿ ಮಲಗಿರುವಾಗ ನಾಲ್ಕು ಗಂಟೆಗೆ ಮನೆಯಿಂದ ಎದ್ದು ಹೊರಬಂದಿದ್ದಾನೆ. ರಾಹುಲ್ ಪ್ರತಿದಿನ ಬೆಳಗಿನ ಜಾವ ಮೂರು ಗಂಟೆಗೆ ಎದ್ದು ಓದಿಕೊಳ್ತಿದ್ದ. ಮಾನಸಿಕ ಒತ್ತಡ ಹೆಚ್ಚಾದಾಗ ಎದ್ದು ವಾಕ್ ಮಾಡ್ತಿದ್ದ. ಅದೇ ರೀತಿ ಇಂದು ಬೆಳಗಿನ ಜಾವ ಕೂಡ ಮನೆಯಿಂದ ಎದ್ದು ಹೊರಬಂದಿದ್ದಾನೆ. ನಾಲ್ಕು ಗಂಟೆಗೆ ಮನೆಯಿಂದ ತೆರಳಿದ್ದಾನೆ. ಬಳಿಕ ಬೆಳಗ್ಗೆ ನಿದ್ದೆಯಿಂದ ಎದ್ದ ಪೋಷಕರು ಮಗ ರೂಮ್ನಲ್ಲಿ ಕಾಣಿಸದ ಹಿನ್ನೆಲೆ ನಿರಂತರವಾಗಿ ಕರೆ ಮಾಡಿದ್ದಾರೆ. ಆದರೆ ರಾಹುಲ್ ಕರೆ ಸ್ವೀಕರಿಸಿಲ್ಲ.

ರಾಹುಲ್ ಮುಂಜಾನೆ ಐದು ಗಂಟೆ ಸುಮಾರಿಗೆ ಶೂಟ್ ಮಾಡಿಕೊಂಡು‌ ಮೃತ ಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತಲೆಯ ಎಡಭಾಗದಲ್ಲಿ ಶೂಟ್ ಮಾಡಿಕೊಂಡಿದ್ದಾನೆ. ಮೃತ ಪಟ್ಟ ಬಳಿಕವೂ ಪೋಷಕರಿಂದ ನಿರಂತರವಾಗಿ ಕರೆ ಬರ್ತಾನೆ ಇತ್ತು. ಬಳಿಕ ಸ್ಥಳದಲ್ಲಿದ್ದ ಪೊಲೀಸರು ಫೋನ್ ತೆಗೆದು ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.

ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಮೃತ ಯುವಕನ ಮೃತದೇಹ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

 

Comments are closed.