ಬೆಂಗಳೂರು: ಚಿಕ್ಕಮಗಳೂರಿನ ದತ್ತಪೀಠದ ಪೂಜಾ ಕೈಂಕರ್ಯ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಇಲ್ಲಿ ಮುಜಾವರ್ ನೇಮಕ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ.
ಬಾಬಾಬುಡನ್ಗಿರಿಯ ಇನಾಂ ದತ್ತಪೀಠದ ಪೂಜಾ ವಿಧಿವಿಧಾನಗಳ ಬಗ್ಗೆ ಹೊಸದಾಗಿ ತೀರ್ಮಾನ ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ ನೀಡಿದ್ದು, ಇದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಸ್ವಾಗತಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಸುನಿಲ್ ಕುಮಾರ್, ಹಿಂದೂಗಳ ಶ್ರದ್ಧಾಕೇಂದ್ರವಾದ ಚಿಕ್ಕಮಗಳೂರಿನ ಐತಿಹಾಸಿಕ ದತ್ತಾತ್ರೇಯ ಪೀಠ ಕುರಿತಂತೆ ಇಂದು ಘನ ನ್ಯಾಯಾಲಯ ವಿಶೇಷ ತೀರ್ಪು ಕೊಟ್ಟಿದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಹಿಂದೂ ಅರ್ಚಕರ ನೇಮಕ ಮಾಡುವ ಕುರಿತಂತೆ ರಾಜ್ಯ ಸರ್ಕಾರ ಒಂದು ಸಮಿತಿ ರಚಿಸಿ, ಅದರ ಅಭಿಪ್ರಾಯ ತೆಗೆದುಕೊಂಡು ಹಿಂದೂ ಅರ್ಚಕರ ನೇಮಕ ಮಾಡಬೇಕು ಎಂದು ಹೇಳಿದೆ ಅಭಿಪ್ರಾಯಪಟ್ಟರು.
ಈ ಹಿಂದೆ ಸುಪ್ರೀಂಕೋರ್ಟ್ ಸಹ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಆದರೆ ಅವತ್ತಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೋರ್ಟ್ ಆದೇಶ ಉಲ್ಲಂಘನೆ ಮಾಡಿ, ಹಿಂದೂ ಅರ್ಚಕರ ನೇಮಕಕ್ಕೆ ಬದಲು ಮುಜಾವರ್ಗಳಿಂದ ಪೂಜೆ ಮುಂದುವರಿಸುವ ಮೂಲಕ ಹಿಂದೂ ವಿರೋಧಿ ನೀತಿ ಅನುಸರಿಸಿತ್ತು. ಭಕ್ತರ ಭಾವನೆಗಳಿಗೆ ಯಾವುದೇ ಬೆಲೆ ಕೊಡದೆ, ಜನಾಭಿಪ್ರಾಯ ಪಡೆಯದೆ ಇಂಥ ನಿರ್ಣಯ ಮಾಡಿತ್ತು ಎಂದರು. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದೆವು. ನ್ಯಾಯಾಲಯವು ಇಂದು ಹಿಂದೂಗಳ ಪರವಾಗಿ ತೀರ್ಪು ಕೊಟ್ಟಿದೆ. ಈ ರೀತಿಯ ತೀರ್ಪು ಬಂದಿರುವುದು ದಶಕಗಳ ಕಾಲ ಹೋರಾಟ ಮಾಡಿದ ಎಲ್ಲ ಹೋರಾಟಗಾರರಿಗೆ ಸಿಕ್ಕ ಜಯ. ಆದಷ್ಟು ಬೇಗ ಮುಜರಾಯಿ ಇಲಾಖೆ, ಹಿಂದೂ ಅರ್ಚಕರ ನೇಮಕ ಮಾಡುತ್ತದೆ ಎಂದು ಭರವಸೆ ವ್ಯಕ್ತಪಡಿಸಿದರು.
Comments are closed.