ಕರಾವಳಿ

ಕುಂದಾಪ್ರ ಕನ್ನಡದ ಬಗ್ಗೆ ‘ಪುನೀತ್’ಗೆ ಅಪಾರ ಒಲವು | ವಿ.ಕೆ ಮೋಹನ್ ಮನೆಯಲ್ಲಿ ಮೀನು, ನಾಟಿ‌ಕೋಳಿ ಖಾದ್ಯ ಸವಿದಿದ್ದ ‘ಅರಸು’

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಹೃದಯಾಘಾತದಿಂದ ಇಂದು (ಅ.29ಶುಕ್ರವಾರ) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕನ್ನಡ ಚಿತ್ರರಂಗದ ನಟ, ಪವರ್ ಸ್ಟಾರ್ ಪುನಿತ್ ರಾಜಕುಮಾರ್ ಅವರು ಕುಂದಾಪುರದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಇದಕ್ಕೆ ಮುಖ್ಯ ಕಾರಣೀಕರ್ತರಾದವರು ಸಿನೆಮಾ ನಿರ್ಮಾಪಕ , ಉದ್ಯಮಿ ಕುಂದಾಪುರ ವಕ್ವಾಡಿ‌ ಮೂಲದ ಬೆಂಗಳೂರು ನಿವಾಸಿ ದಿವಂಗತ ವಿ.ಕೆ ಮೋಹನ್ (ಕಪಾಲಿ ಮೋಹನ್).

 

ವಿ.ಕೆ. ಮೋಹನ್ ಜೊತೆ ಉತ್ತಮ ನಂಟು..
ವಿ.ಕೆ. ಮೋಹನ್ ಹಲವಾರು ವರ್ಷಗಳಿಂದ ಚಿತ್ರರಂಗದ ಮೇರು ನಟ ದಿವಂಗತ ಡಾ. ರಾಜಕುಮಾರ್ ಜೊತೆ ಹಾಗೂ ಅವರ ಕುಟುಂಬದ ಜೊತೆ ನಿಕಟವಾಗಿ ಗುರುತಿಸಿಕೊಂಡಿದ್ದರು. ಹೀಗಾಗಿಯೇ ಸ್ವಾಭಾವಿಕವಾಗಿ ಇಡೀ ಕುಟುಂಬದವರು ಕೂಡ ವಿ.ಕೆ ಮೋಹನ್ ಅವರ ಬಗ್ಗೆ ಉತ್ತಮ ಸಂಬಂಧ ಹೊಂದಿದ್ದರು. ರಾಜಕುಮಾರ್‌ ಕೂಡ ವಕ್ವಾಡಿಗೆ ಆಗಮಿಸಿದ್ದು ದೊಡ್ಡ ಇತಿಹಾಸ ಸೃಷ್ಟಿಸಿದ ಕಾರ್ಯಕ್ರಮ. ಅವರ ಕಾಲಾನಂತರವೂ‌ ವಿ.ಕೆ. ಮೋಹನ್ ಡಾ. ರಾಜ್ ಫ್ಯಾಮಿಲಿ‌ಜೊತೆ‌ ಅ‌ನ್ಯೋನ್ಯವಾಗಿಯೇ ಇದ್ದರು. ಕುಂದಾಪುರಕ್ಕೆ‌ ಡಾ. ಶಿವರಾಜಕುಮಾರ್ ಸಹಿತ ಅವರ ಕುಟುಂಬದ ಯಾವುದೇ ಸದಸ್ಯರು‌‌ ಆಗಮಿಸಬೇಕಿದ್ದರೆ ಅಲ್ಲಿ ವಿ.ಕೆ. ಮೋಹನ್ ಇರಲೇ ಬೇಕಿತ್ತು.‌ ಕಳೆದ ಆರೇಳು ವರ್ಷದ ಹಿಂದೆ ಕುಂದಾಪುರ ಬಿಲ್ಲವ ಸಂಘದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಪವರ್ ಸ್ಟಾರ್ ಅಪ್ಪು ವಿ.ಕೆ ಮೋಹನ್ ಅವರ ವಕ್ವಾಡಿಯ ನಿವಾಸಕ್ಕೆ ಭೇಟಿ‌ ನೀಡಿದ್ದರು. ಅಲ್ಲದೆ ಆನೆಗುಡ್ಡೆ ಶ್ರೀ‌ವಿನಾಯಕ ದೇವಸ್ಥಾನಕ್ಕೆ ಭೇಟಿ‌ ನೀಡಿ ಪೂಜೆ ಸಲ್ಲಿಸಿದ್ದು ಕುಂದಾಪುರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. ಅಂದು ಮೋಹನ್ ಮನೆಯಲ್ಲಿ ನಾಟಿ‌ಕೋಳಿಗಳನ್ನು ಕಂಡು‌ಖುಷಿಪಟ್ಟ ಅವರು ಕೋಳಿ‌ಕಾಳಗ ಕಂಡು ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿಕೊಂಡು ಸಂಭ್ರಮಿಸಿದ್ದರು.

ವಿ.ಕೆ ಮೋಹನ್ ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ನಿಧನರಾದಾಗ ಪುನೀತ್ ಬಹಳಷ್ಟು ನೊಂದುಕೊಂಡಿದ್ದರು. ಇನ್ನೊಂದು ಸಂಗತಿಯೆಂದರೆ ದಿವಂಗತ ವಿ.ಕೆ ಮೋಹನ್ ಜನ್ಮದಿನ ಇಂದು (ಅ.29). ಗೆಳೆಯನಂತಿದ್ದ ವಿ.ಕೆ ಮೋಹನ್ ಜನ್ಮದಿನದಂದೆ ಪುನೀತ್ ಇಹಲೋಕ ತ್ಯಜಿಸಿದ್ದು ನಿಜಕ್ಕೂ ಕಾಕತಾಳೀಯ ವಿಚಾರ.

ಇನ್ನು 2017ರಲ್ಲಿ ಕುಂದಾಪುರಕ್ಕೆ ಭೇಟಿ ನೀಡಿದ್ದ ವೇಳೆ ಪುನಿತ್ ರಾಜಕುಮಾರ್ ಕುಟುಂಬ ಕೊಲ್ಲೂರು ಶ್ರೀ ಮೂಕಾಂಬಿಕೆ‌ ದರ್ಶನ ಪಡೆದು ಮತ್ತೆ ಮೋಹನ್ ಜೊತೆ ವಕ್ವಾಡಿಯ ಉದ್ಯಮಿ‌ ವಿ.ಕೆ ಹರೀಶ್ ನಿವಾಸಕ್ಕೆ ಆಗಮಿಸಿದ್ದರು. ಅಲ್ಲಿಯೇ ನಾಟಿಕೋಳಿ, ನೀರು ದೋಸೆ, ಕಡಬು, ಹಾಗೂ ವಿವಿಧ ಮೀನು ಖಾದ್ಯಗಳನ್ನು ಸವಿದು ಪುನೀತ್ ಸಂಭ್ರಮಿಸಿದ್ರು. ಅಂದು‌ ಸ್ಥಳೀಯ ಮಾಧ್ಯಮಗಳ‌ ಜೊತೆ‌ ಆತ್ಮೀಯವಾಗಿ ಮಾತನಾಡಿದ್ದ ಅವರು, ನನಗೆ ಮೀನು ಊಟ ತುಂಬಾನೇ ಇಷ್ಟ. ತಂದೆಯ ಮೂಲಕ ಕರಾವಳಿಯ ಸಂಪರ್ಕ ಸಾಧ್ಯವಾಗಿದೆ. ತಂದೆಯವರು ಕೂಡ ಈ ಭಾಗವನ್ನು ತುಂಬಾನೇ ಇಷ್ಟಪಡುತ್ತಿದ್ದರು ಎಂಬುದನ್ನು ಮೆಲುಕು ಹಾಕಿದ್ರು. ತುಳು ಚಿತ್ರರಂಗ ಈಗ ಬೆಳೆಯುತ್ತಿರುವುದು ಉತ್ತಮ ವಿಚಾರ ಎಂದ ಅವರು ಅವಕಾಶ ಸಿಕ್ಕಲ್ಲಿ ತುಳು ಚಿತ್ರದ ಗೀತೆ ಹಾಡುವ ಬಯಕೆಯಿದೆ ಎಂದಿದ್ದರು. ಕುಂದಾಪುರದಲ್ಲಿ ನನಗೆ ಅನೇಕ ಗೆಳೆಯರಿದ್ದಾರೆ. ಇಲ್ಲಿಯ ಜನ ಸಜ್ಜನರು ಎಂದು ಗುಣಗಾನ ಮಾಡಿದ್ದರು.

ಕುಂದಾಪುರ ಕನ್ನಡದ ಬಗ್ಗೆ ‘ಅಪ್ಪು’ ಒಲವು…
ಸಂಗೀತ ನಿರ್ದೇಶಕ ರವಿ ಬಸ್ರೂರು ಅವರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಪುನಿತ್ ಅವರು, ಬಿಲಿಂಡರ್ ಚಿತ್ರದ ಚಿಲ್ರಿ ಶೋಕಿ ಗಂಡ್ ನಾನಲ್ಲ ಎಂಬ ಕುಂದಾಪ್ರ ಕನ್ನಡ ಗೀತೆಗೆ ಧ್ವನಿ ನೀಡಿದ್ದರು. ಅಲ್ಲದೆ‌ ಹಿಟ್ ಆದ ‘ಅಂಜನಿಪುತ್ರ’ ಸಿನೆಮಾದಲ್ಲಿ ‘ಬಾರಿ‌ಖುಷಿ ಮರ್ರೆ ನಂಗೆ ನನ್ನ ಹೆಂಡ್ತಿ ಕಂಡ್ರೆ’ ಹಾಡು ಇಂದಿಗೂ ಜನರ ಫೆವರೆಟ್ ಸಾಂಗ್ ಆಗಿಯೇ ಇದೆ.

(ಸಂಗ್ರಹ ಚಿತ್ರಗಳು- 2014, 2017)

 

 

Comments are closed.