ಕುಂದಾಪುರ: ಪರಿಚಿತ ಯುವಕನೋರ್ವ 75 ವರ್ಷ ಪ್ರಾಯದ ವೃದ್ದೆಯ ಕಿವಿಯಲ್ಲಿದ್ದ ಚಿನ್ನದ ಬೆಂಡೋಲೆ ಎಗರಿಸಿ ಪರಾರಿಯಾದ ಘಟನೆ ಕುಂದಾಪುರ ತಾಲೂಕು ಬಸ್ರೂರಿನಲ್ಲಿ ನಡೆದಿದ್ದು ವೃದ್ಧೆ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಕುಂದಾಪುರ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಸ್ರೂರು ಗ್ರಾಮದ ಹಟ್ಟಿಕುದ್ರು ನಿವಾಸಿ ಎನ್ನಲಾದ ಮಧುಕರ ಮೊಗವೀರ (32) ಬಂಧಿತ ಆರೋಪಿ.
ಘಟನೆ ವಿವರ:
ಡಿ.7ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಸ್ರೂರು ಬಾಳೆಹಿತ್ಲು ಬಿಸಾರ್ ಮನೆ ನಿವಾಸಿ 75 ವರ್ಷ ಪ್ರಾಯದ ಕರಿಯಮ್ಮ ಎನ್ನುವವರು ಮೀನು ತರಲೆಂದು ಬಸ್ರೂರು ಗ್ರಾಮದ ನಿವೇದಿತ ಶಾಲೆಯ ಬಳಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕರಿಯಮ್ಮ ಅವರ ಪರಿಚಯದವನೇ ಆದ ಆರೋಪಿ ಮಧುಕರ ಮೊಗವೀರ ಹಿಂದಿನಿಂದ ಬಂದು ಅವರನ್ನು ನೆಲಕ್ಕೆ ದೂಡಿ ಮುಖಕ್ಕೆ ಗುದ್ದಿ ಕರಿಯಮ್ಮ ಎಡ ಕಿವಿಯಲ್ಲಿ ಧರಿಸಿದ ಚಿನ್ನದ ಬೆಂಡೋಲೆಯನ್ನು ಕಿವಿಯಿಂದ ಹರಿದು ತೆಗೆದುಕೊಂಡಿದ್ದು ಕರಿಯಮ್ಮ ಕಿರುಚಾಡಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಇದೇ ವೇಳೆ ಕರಿಯಮ್ಮ ಅವರ ಕಿವಿಗೆ ಗಾಯವಾಗಿದೆ. ಮಧುಕರ ಎಳೆದುಕೊಂಡು ಹೋದ ಚಿನ್ನದ ಬೆಂಡೋಲೆ ಮೌಲ್ಯ ಅಂದಾಜು 12 ಸಾವಿರ ರೂ. ಆಗಿದೆ. ಈ ಬಗ್ಗೆ ಕರಿಯಮ್ಮ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗ್ರಾಮಾಂತರ ಠಾಣೆ ಪಿಎಸ್ಐ ನಿರಂಜನ್ ಗೌಡ ಬಿ.ಎಸ್ ನೇತೃತ್ವದಲ್ಲಿ ಸಿಬ್ಬಂದಿಗಳು ಆರೋಪಿ ಮಧುಕರನನ್ನು ಬಂಧಿಸಿದ್ದಾರೆ. ಆರೋಪಿ ಕುಂದಾಪುರದ ಚಿನ್ನದಂಗಡಿಯಲ್ಲಿ ಈ ಬೆಂಡೋಲೆ ಮಾರಾಟ ಮಾಡಿದ್ದ ಎನ್ನಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಡಿ.21 ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.